ಜೀವಹಾನಿ ಸ್ವೀಕಾರಾರ್ಹವಲ್ಲ, ಮಾತುಕತೆಗಳಿಂದ ಮಾತ್ರ ಸಮಸ್ಯೆಯ ಪರಿಹಾರ ಸಾಧ್ಯ: ವಿದೇಶಾಂಗ ಕಾರ್ಯದರ್ಶಿ

ಹರ್ಷವರ್ಧನ ಶ್ರಿಂಗ್ಲಾ
ಹೊಸದಿಲ್ಲಿ,ಫೆ.28: ತಾನು ಉಕ್ರೇನ್ ಬಿಕ್ಕಟ್ಟಿನ ಎಲ್ಲ ಪಾಲುದಾರರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಭಾರತವು ಭಾವಿಸಿದೆ,ಆದರೆ ಮಾನವ ಜೀವಗಳು ಬಲಿಯಾಗುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರು,ರಾಜತಾಂತ್ರಿಕತೆ ಮತ್ತು ಮಾತುಕತೆ ಮಾತ್ರ ಸಮಸ್ಯೆಯನ್ನು ಬಗೆಹರಿಸುತ್ತವೆ ಎಂದು ಒತ್ತಿ ಹೇಳಿದ್ದಾರೆ.
ರವಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು,ಪರಿಸ್ಥಿತಿಯ ಕುರಿತು ಭಾರತದ ನಿಲುವು ಸ್ಥಿರವಾಗಿದೆ ಎಂದರು. ಶನಿವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ)ಯಲ್ಲಿ ಉಕ್ರೇನ್ ವಿರುದ್ಧ ರಷ್ಯದ ಆಕ್ರಮಣವನ್ನು ಖಂಡಿಸುವ ನಿರ್ಣಯದ ಮೇಲಿನ ಮತದಾನದಿಂದ ಭಾರತವು ದೂರವುಳಿಸಿತ್ತು.
‘ವಿಕಸನಗೊಳ್ಳುತ್ತಿರುವ ಸ್ಥಿತಿಯ ಬಗ್ಗೆ ನಾವು ಯುಎನ್ಎಸ್ಸಿಯಲ್ಲಿ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದೇವೆ. ಜೀವಹಾನಿ ಸ್ವೀಕಾರಾರ್ಹವಲ್ಲ ಎಂದೂ ನಾವು ಒತ್ತಿ ಹೇಳಿದ್ದೇವೆ. ಇದೇ ವೇಳೆ,ರಾಜತಾಂತ್ರಿಕತೆ ಮತ್ತು ಮಾತುಕತೆ ಏಕೈಕ ಪರ್ಯಾಯವಾಗಿದೆ ಎಂದೂ ನಾವು ಹೇಳಿದ್ದೇವೆ ’ ಎಂದು ಶ್ರಿಂಗ್ಲಾ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಅವರೊಂದಿಗೆ ಮಾತುಕತೆ ನಡೆಸಿರುವ ಹಿನ್ನೆಲೆಯಲ್ಲಿ ಭಾರತವು ರಷ್ಯದ ಆಕ್ರಮಣವನ್ನು ಖಂಡಿಸುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
‘ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹಲವಾರು ಸಂಧಾನಕಾರರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದ ಶ್ರಿಂಗ್ಲಾ,ಪ್ರದೇಶದಲ್ಲಿ ಸ್ನೇಹಿತರು ಮತ್ತು ಸಮಾನಮನಸ್ಕರನ್ನು ನಾವು ಹೊಂದಿದ್ದೇವೆ. ನಾವು ಸಂಬಂಧಿತ ಎಲ್ಲ ಪಾಲುದಾರರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಭಾವಿಸಲು ಎಲ್ಲ ಕಾರಣಗಳೂ ಇವೆ ’ಎಂದರು.





