ಕಠಿಣ ಪರಿಸ್ಥಿತಿಯಿದ್ದರೂ ಭಾರತೀಯರ ತೆರವಿಗೆ ನಾವು ನೆರವಾಗುತ್ತಿದ್ದೇವೆ: ಉಕ್ರೇನ್ ರಾಯಭಾರಿ

ಉಕ್ರೇನ್ ರಾಯಭಾರಿ
ಹೊಸದಿಲ್ಲಿ,ಫೆ.28: ಅತ್ಯಂತ ಕಠಿಣ ಮತ್ತು ಸಂಕೀರ್ಣ ಸ್ಥಿತಿಯಿದ್ದರೂ ಭಾರತೀಯ ಪ್ರಜೆಗಳನ್ನು ತೆರವುಗೊಳಿಸಲು ಉಕ್ರೇನ್ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಭಾರತದಲ್ಲಿ ಆ ದೇಶದ ರಾಯಭಾರಿಯಾಗಿರುವ ಇಗೊರ್ ಪೊಲಿಖಾ ಅವರು ಸೋಮವಾರ ಇಲ್ಲಿ ತಿಳಿಸಿದರು.
ತಾನೇ ಖುದ್ದಾಗಿ ಉಕ್ರೇನ್ ಭದ್ರತಾ ಪಡೆಗಳನ್ನು ಸಂಪರ್ಕಿಸಿ ಅತಂತ್ರರಾಗಿರುವ ಭಾರತೀಯರಿಗೆ ನೆರವಾಗುವಂತೆ ಕೋರಿಕೊಂಡಿದ್ದೇನೆ ಎಂದರು.
‘ಪರಿಸ್ಥಿತಿಯು ಅತ್ಯಂತ ಕಠಿಣ ಮತ್ತು ಸಂಕೀರ್ಣವಾಗಿದೆ. ನಮ್ಮ ಸಂಪನ್ಮೂಲಗಳು ಸೀಮಿತವಾಗಿವೆ. ನಾವು ಆಕ್ರಮಣದ ಬಲಿಪಶುಗಳಾಗಿದ್ದೇವೆ. ಆದಾಗ್ಯೂ ಇತರ ದೇಶಗಳ ಪ್ರಜೆಗಳು ಸೇರಿದಂತೆ ಜನರಿಗೆ ನೆರವಾಗಲು ನಾವು ಪ್ರಯತ್ನಿಸುತ್ತಿದ್ದೇವೆ ’ಎಂದು ಹೇಳಿದ ಪೊಲಿಖಾ,‘ರಾಜತಾಂತ್ರಿಕರು,ವಿದೇಶಿಯರು ಮತ್ತು ಉಕ್ರೇನ್ ಪ್ರಜೆಗಳು ಸೇರಿದಂತೆ ಲಕ್ಷಾಂತರ ಜನರು ಉಕ್ರೇನ್ನಿಂದ ನಿರ್ಗಮಿಸಲು ಸಾಲುಗಟ್ಟಿ ನಿಂತಿದ್ದಾರೆ.ಹೀಗಾಗಿ ಉಕ್ರೇನ್-ಪೋಲಂಡ್ ಗಡಿದಾಟುವಿನಲ್ಲಿ ಸವಾಲಿನ ಸ್ಥಿತಿಯಿದೆ. ಭಾರತೀಯರ ಪ್ರಕರಣದಲ್ಲಿ ಅವರಿಗೆ ನೆರವಾಗಲು ನಮ್ಮ ವೈಯಕ್ತಿಕ ಸಂಪರ್ಕಗಳನ್ನು ಬಳಸಿಕೊಳ್ಳಲು ನಾವು ಯತ್ನಿಸುತ್ತಿದ್ದೇವೆ. ಆದರೆ ನೀವು ತಳಮಟ್ಟದಲ್ಲಿಯ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳಬೇಕು,ನಾವು ಯುದ್ಧದ ನಡುವಿನಲ್ಲಿದ್ದೇವೆ ’ ಎಂದರು.
ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ನೀವು ಭರವಸೆ ನೀಡಬಲ್ಲಿರಾ ಎಂಬ ಪ್ರಶ್ನೆಗೆ,‘ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತ್ರ ಈ ಭರವಸೆಯನ್ನು ನೀಡಬಲ್ಲರು. ಮೂರು ಗಂಟೆಗಳ ನಂತರ ಅಲ್ಲಿ ಏನಾಗಲಿದೆ ಎನ್ನುವುದು ನನಗೆ ತಿಳಿದಿಲ್ಲ. ಪ್ರತಿಯೊಬ್ಬರಿಗೂ ನೆರವಾಗಲು ನಾವು ಪ್ರಯತ್ನಿಸುತ್ತಿದ್ದೇವೆ ’ಎಂದು ಪೊಲಿಖಾ ಉತ್ತರಿಸಿದರು.





