ಮಟ್ಟಿ ಲಕ್ಷ್ಮೀನಾರಾಯಣ ರಾವ್‌ಗೆ ‘ಸೇವಾಭೂಷಣ’ ಪ್ರಶಸ್ತಿ ಪ್ರದಾನ

ಉಡುಪಿ, ಮಾ.1: ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದ ಶ್ರೀರಾಮಠಲ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ, ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮಟ್ಟಿ ಲಕ್ಷ್ಮಿನಾರಾಯಣ ರಾವ್ ಇವರಿಗೆ ‘ಸೇವಾಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು ಯಕ್ಷಗಾನ ಕಲಾರಂಗದಲ್ಲಿ 27 ವರ್ಷ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾಭೂಷಣ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಣಿಯೂರುಶ್ರೀಗಳು ಮಟ್ಟಿ ಶ್ರೀಲಕ್ಷ್ಮೀ ನಾರಾಯಣ ರಾವ್, ಶ್ರೀಕಷ್ಣ ಮಠಕ್ಕೆ, ವಿವಿಧ ದೇವಸ್ಥಾನಗಳಿಗೆ ಹಾಗೂ ಆತ್ಮೀಯ ಒಡನಾಡಿಗಳಿಗೆ ಪ್ರತೀ ವರ್ಷ ವಾದಿರಾಜ ಅನುಗ್ರಹಿತ ಮಟ್ಟಿಗುಳ್ಳ ವನ್ನು ಉಚಿತವಾಗಿ ನೀಡಿ ಸಮಾಜದ ಎಲ್ಲಾ ಚಟುವಟಿಗಕೆಗಳಲ್ಲಿ ಪಾಲ್ಗೊಂಡು ಬದುಕನ್ನು ಸಂಭ್ರಮಿಸಿದ ಸರಳ ವ್ಯಕ್ತಿಯಾಗಿದ್ದಾರೆ ಎಂದರು.
ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅತಿಥಿಗಳಾಗಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್‌ನ ಗುರುಗಳಾಗಿ ಒಂದು ದಶಕದಿಂದ ಸೇವೆ ಸಲ್ಲಿಸುತ್ತಿರುವ, ಯಕ್ಷಗಾನ ಕೇಂದ್ರದ ಗುರುಗಳಾದ ಬಗ್ವಾಡಿ ಕೃಷ್ಣಮೂರ್ತಿ ಭಟ್ ಇವರ ಪತ್ನಿ ತೀವ್ರ ಅಸೌಖ್ಯದಿಂದ ಇದ್ದು ಅವರಿಗೆ ವೈದ್ಯಕೀಯ ನೆರವಾಗಿ ಸಂಸ್ಥೆಯ ಕಾರ್ಯಕಾರಿ ಸದಸ್ಯರ ವತಿಯಿಂದ ಒಂದು ಲಕ್ಷ ರೂ. ಚೆಕ್ ನೀಡಲಾಯಿತು.
ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ ದರು. ಉಪಾಧ್ಯಕ್ಷ ಎಸ್.ವಿ.ಭಟ್, ಎಸ್.ಗೋಪಾಲಕೃಷ್ಣರಿಗೆ ನುಡಿನಮನ ಸಲ್ಲಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ಜತೆ ಕಾರ್ಯದರ್ಶಿ ಎಚ್.ಎನ್.ಶೃಂಗೇಶ್ವರ ವಂದಿಸಿದರು.