ಕೀವ್ ಸಮೀಪಿಸಿದ ರಶ್ಯಾ ಪಡೆ: ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ನ 70 ಯೋಧರ ಮೃತ್ಯು

ರಶ್ಯಾದ ಸೇನಾ ವಾಹನಗಳ ಸಾಲು ಉಕ್ರೇನ್ ನ ರಾಜಧಾನಿ ಕೀವ್ ನತ್ತ ಮುಂದೊತ್ತಿ ಬರುತ್ತಿದ್ದು ರಶ್ಯಾದ ಕ್ಷಿಪಣಿ ದಾಳಿಯಲ್ಲಿ ತನ್ನ 70ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ. ಈ ಮಧ್ಯೆ, ಖಾರ್ಕಿವ್ ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ. ಉಕ್ರೇನ್ ಮೇಲಿನ ರಶ್ಯಾ ದಾಳಿಗೆ ಸಂಬಂಧಿಸಿ ಮಂಗಳವಾರದ ಕೆಲವು ಮಹತ್ವದ ಬೆಳವಣಿಗೆಗಳು ಇಲ್ಲಿವೆ.
ರಶ್ಯಾದ ಕ್ಷಿಪಣಿ ದಾಳಿಯಲ್ಲಿ 70ಕ್ಕೂ ಅಧಿಕ ಉಕ್ರೇನ್ ಯೋಧರು ಮೃತಪಟ್ಟಿದ್ದು, ನಾಗರಿಕರ ಮೇಲೆ ನಡೆಸಿದ ಬರ್ಬರ ಶೆಲ್ ದಾಳಿಯಲ್ಲಿ ಹಲವಾರು ಪ್ರಜೆಗಳು ಮೃತರಾಗಿರುವುದಾಗಿ ಉಕ್ರೇನ್ ಹೇಳಿದೆ. ಉಕ್ರೇನ್ ನ ಖಾರ್ಕಿವ್ ನಲ್ಲಿ ಮಂಗಳವಾರ ಸರಕಾರಿ ಕಟ್ಟಡವನ್ನು ರಶ್ಯಾ ಪಡೆಗಳು ಧ್ವಂಸಗೊಳಿಸಿದಾಗ, ಅಲ್ಲೇ ಸಮೀಪದಲ್ಲಿದ್ದ ಕರ್ನಾಟಕದ ಹಾವೇರಿ ಜಿಲ್ಲೆಯ ಯುವಕ, ನವೀನ್ ಎಂಬ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವಿದೇಶ ವ್ಯವಹಾರ ಇಲಾಖೆ ಮಾಹಿತಿ ನೀಡಿದೆ.
ಖಾರ್ಕಿವ್ನಲ್ಲಿನ ಹಲವು ಜನವಸತಿ ಪ್ರದೇಶಗಳ ಮೇಲೆ ರಶ್ಯಾದಿಂದ ಫಿರಂಗಿ ದಾಳಿ. ಕಳೆದ ಗುರುವಾರ ಆಕ್ರಮಣ ಆರಂಭವಾದಂದಿನಿಂದ 14 ಮಕ್ಕಳ ಸಹಿತ 352 ನಾಗರಿಕರು ಮೃತಪಟ್ಟಿರುವುದಾಗಿ ಉಕ್ರೇನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತನಗೂ ನಷ್ಟವಾಗಿದೆ ಎಂದು ಇದೇ ಮೊದಲ ಬಾರಿ ಒಪ್ಪಿಕೊಂಡ ರಶ್ಯಾ.
ರಶ್ಯಾದ ಆಕ್ರಮಣ ಆರಂಭವಾದಂದಿನಿಂದ 5 ಲಕ್ಷಕ್ಕೂ ಅಧಿಕ ಜನ ಉಕ್ರೇನ್ನಿಂದ ನೆರೆರಾಷ್ಟ್ರಗಳಿಗೆ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆಯ ಮಾಹಿತಿ. ಉಕ್ರೇನ್ ರಾಜಧಾನಿ ಕೀವ್ ನ ಸಮೀಪ 64 ಕಿ.ಮೀನಷ್ಟು ಉದ್ದದ ರಶ್ಯಾ ಸೇನೆಯ ವಾಹನಗಳ ಸಾಲು ನಿಂತಿರುವುದು ಉಪಗ್ರಹ ರವಾನಿಸಿದ ಚಿತ್ರಗಳಿಂದ ಕಂಡುಬಂದಿದೆ.
ರಶ್ಯಾ-ಉಕ್ರೇನ್ ನಡುವಿನ ಪ್ರಥಮ ಸುತ್ತಿನ ಸಂಧಾನ ಸಭೆಯಲ್ಲಿ ಯಾವುದೇ ಫಲಿತಾಂಶ ಸಾಧ್ಯವಾಗಿಲ್ಲ. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತಿನಿಂದ ರಶ್ಯಾ ವಿರುದ್ಧ ವ್ಯಾಪಕ ಆಕ್ರೋಶ. ಈ ವರ್ಷದ ಫುಟ್ಬಾಲ್ ವಿಶ್ವಕಪ್ ಟೂರ್ನಿಯಿಂದ ರಶ್ಯಾ ಉಚ್ಛಾಟನೆ. ರಶ್ಯಾ ವಿರುದ್ಧ ಜಾಗತಿಕ ಕ್ರೀಡಾ ನಿಷೇಧಕ್ಕೆ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಕರೆ.
ಉಕ್ರೇನ್ ಮೇಲಿನ ರಶ್ಯಾ ಆಕ್ರಮಣಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯಲ್ಲಿ ನಿರ್ಣಯ ಅಂಗೀಕಾರದಿಂದ ಮತ್ತೊಮ್ಮೆ ದೂರ ಉಳಿದ ಭಾರತ. ಈ ವಾರದಲ್ಲಿ 2ನೇ ಬಾರಿ ವಿಶ್ವಸಂಸ್ಥೆಯಲ್ಲಿ ಈ ನಿಲುವು ತಳೆದ ಭಾರತ ಸರಕಾರ.
ಬೆಲಾರೂಸ್ ಗಡಿಭಾಗದಲ್ಲಿ ರಶ್ಯಾ-ಉಕ್ರೇನ್ ಸಂಧಾನ ಮಾತುಕತೆಗೆ ಭಾರತದ ಸ್ವಾಗತ.
ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ನಿಯೋಗದಲ್ಲಿದ್ದ 12 ರಶ್ಯಾದ ರಾಜತಾಂತ್ರಿಕರನ್ನು ದೇಶದಿಂದ ಉಚ್ಛಾಟಿಸಿದ ಅಮೆರಿಕ. ರಾಷ್ಟ್ರೀಯ ಭದ್ರತೆಗೆ ಎದುರಾದ ಆತಂಕದಿಂದ ಈ ಕ್ರಮ ಎಂದು ಅಮೆರಿಕದ ಹೇಳಿಕೆ.







