ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಸದುಪಯೋಗವಾಗಬೇಕು: ಮೌಲಾನ ಶಬ್ಬೀರ್ ನದ್ವಿ

ಬೆಂಗಳೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡಿದಾಗ ಮಾತ್ರ, ಅದರ ಸದುಪಯೋಗವಾಗುತ್ತದೆ ಎಂದು ನಾಸೀಹ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮೌಲಾನ ಸೈಯ್ಯದ್ ಶಬ್ಬೀರ್ ನದ್ವಿ ಹೇಳಿದರು.
ನಗರದ ಫ್ರೇಜರ್ ಟೌನ್‍ನಲ್ಲಿರುವ ನಾಸೀಹ್ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವೈಜ್ಞಾನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ತಮ್ಮನ್ನು ತಾಂತ್ರಿಕತೆ, ತಂತ್ರಜ್ಞಾನದೊಂದಿಗೆ ಜೋಡಿಸಿಕೊಂಡಿದ್ದಾರೆ. ಇಂಟರ್‍ನೆಟ್ ಮೂಲಕ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ನಡೆಸಿದಂತಹ ಆನ್‍ಲೈನ್ ತರಗತಿಗಳು ಕೂಡ ಒಂದು ಹಂತದಲ್ಲಿ ವಿದ್ಯಾರ್ಥಿಗಳನ್ನು ತಂತ್ರಜ್ಞಾನದ ಸಮೀಪ ತರುವಂತೆ ಮಾಡಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶಕೊಟ್ಟಾಗ ಆವಿಷ್ಕಾರಗಳು ಹೊರಹೊಮ್ಮುವ ಸಾಧ್ಯತೆಗಳಿವೆ ಎಂದು ಶಬ್ಬೀರ್ ನದ್ವಿ ಹೇಳಿದರು.
ಆದುದರಿಂದ, ಪ್ರತಿ ವರ್ಷ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಪ್ರದರ್ಶನಗಳನ್ನು ಸಿದ್ಧಪಡಿಸಿ ಇಡಲಾಗುತ್ತದೆ. ಅಲ್ಲದೆ, ಉತ್ತಮವಾದ ಪ್ರದರ್ಶನವನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಅತ್ಯುತ್ತಮವಾದ ಪ್ರದರ್ಶನವನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳಿಗೆ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ಸಿಲಿಕಾನ್ ಸಿಟಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಝಿಯಾವುಲ್ಲಾ ಖಾನ್ ಪುರಸ್ಕಾರ ನೀಡಿ ಗೌರವಿಸಿದರು.







