7 ವರ್ಷಗಳಿಂದ ಗಡಿಪಾರಿನ ನಿರೀಕ್ಷೆಯಲ್ಲಿರುವ ವ್ಯಕ್ತಿಗೆ ಸರಕಾರ ಏನು ಮಾಡಿದೆ?: ಸುಪ್ರೀಂಕೋರ್ಟ್

ಹೊಸದಿಲ್ಲಿ,ಮಾ.1: ವಿದೇಶಿ ಪ್ರಜೆಗಳ ಕಾಯ್ದೆಯಡಿ ವಿದೇಶೀಯನೆಂದು ಗುರುತಿಸಲ್ಪಟ್ಟು ಬಂಧನ ಕೇಂದ್ರದಲ್ಲಿ ಇರಿಸಲಾಗಿರುವ ವ್ಯಕ್ತಿಯ ಬಿಡುಗಡೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೇಳಿದೆ. ಪಾಕಿಸ್ತಾನವು ಈ ವ್ಯಕ್ತಿಯನ್ನು ತನ್ನ ಪ್ರಜೆಯೆಂದು ಒಪ್ಪಿಕೊಳ್ಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಆತನನ್ನು ಗಡಿಪಾರು ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನಿಗೆ ಭಾರತೀಯ ಪೌರತ್ವ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಕೇಂದ್ರ ಸರಕಾರದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಈ ಬಗ್ಗೆ ಸೂಚನೆ ನೀಡಲು ಕಾಲಾವಕಾಶ ನೀಡುವಂತೆ ಕೋರಿದರು. ಆದನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿತು.
ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ನಿಲುವು ಏನು ಎಂಬ ಬಗ್ಗೆ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಎಎಸ್‌ಜಿ ಅವರು ‘‘ವಿದೇಶಿಯರ ಕಾಯ್ದೆಯ ಸೆಕ್ಷನ್ 3 (2) (ಇ) ಪ್ರಕಾರ ಓರ್ವ ವ್ಯಕ್ತಿಯನ್ನು ವಿದೇಶಿಯನೆಂದು ಘೋಷಿಸಿದ ಬಳಿಕ, ಆತನನ್ನು ನಿರ್ದಿಷ್ಟ ಸ್ಥಳದಲ್ಲಿ ಇರಿಸಬೇಕಾಗುತ್ತದೆ. ಆತನಿಗೆ ಹೊರಗೆ ಹೋಗಲು ಅವಕಾಶವಿರುವುದಿಲ್ಲ’’ ಎಂದರು.
ಪ್ರಕರಣದ ಆರೋಪಿ ಮುಹಮ್ಮದ್ ಖಮಾರ್ ಯಾನೆ ಮುಹಮ್ಮದ್ ಖಾಮಿಲ್ 2015ರ ಫೆಬ್ರವರಿ 7ರಿಂದ ಬಂಧನಕೇಂದ್ರದಲ್ಲಿದ್ದಾನೆ. ಆತ ಗಡಿಪಾರಿನ ನಿರೀಕ್ಷೆಯಲ್ಲಿದ್ದರೂ ಪಾಕಿಸ್ತಾನ ಸರಕಾರವು ಆತನನ್ನು ಸ್ವೀಕರಿಸಲು ನಿರಾಕರಿಸಿದೆ. ಆತನ ಐವರು ಮಕ್ಕಳು ಭಾರತದಲ್ಲಿ ಜನಿಸಿದ್ದು, ಭಾರತೀಯ ಪೌರತ್ವವನ್ನ ಹೊಂದಿದ್ದಾರೆ.
‘‘ಆರೋಪಿಯು ಕಳೆದ ಏಳು ವರ್ಷಗಳಿಂದ ಗಡಿಪಾರಿನ ನಿರೀಕ್ಷೆಯಲ್ಲಿದ್ದಾನೆ. ಆದರೆ ಸರಕಾರ ಆತನಿಗಾಗಿ ಏನು ಮಾಡಿದೆ" ಎಂದು ನ್ಯಾಯಾಧೀಶರು ಎಎಸ್‌ಜಿಯವರನ್ನು ಪ್ರಶ್ನಿಸಿದ್ದರು.
62 ವರ್ಷ ವಯಸ್ಸಿನ ಮುಹಮ್ಮದ್ ಖಮಾರ್ ಭಾರತದಲ್ಲಿ ಜನಿಸಿದ್ದನು ಹಾಗೂ 1967-68ರಲ್ಲಿ ಆತ ತನ್ನ ಬಂಧುಗಳನ್ನು ಭೇಟಿಯಾಗಲು ತಾಯಿಯೊಂದಿಗೆ ತೆರಳಿದ್ದನು. ಆದರೆ ಆತನ ತಾಯಿ ಅಲ್ಲೇ ಮೃತಪಟ್ಟಿದ್ದಳು ಹಾಗೂ ಆತ ತನ್ನ ಬಂಧುಗಳ ಜೊತೆ ಉಳಿದುಕೊಂಡಿದ್ದ. 1980ರ ದಶಕದಲ್ಲಿ ಆತ ಪಾಕಿಸ್ತಾನಿ ಪಾಸ್ ಪೋರ್ಟ್ ನೊಂದಿಗೆ ಭಾರತಕ್ಕೆ ಆಗಮಿಸಿದ್ದ. ಉತ್ತರಪ್ರದೇಶದ ಮಹಿಳೆಯನ್ನು ಮದುವೆಯಾದ ಆತ ಆಕೆಯಿಂದ ಐದು ಮಕ್ಕಳನ್ನು ಪಡೆದಿದ್ದ.







