ಅಶ್ಲೀಲ, ಆಕ್ಷೇಪಾರ್ಹ ಅಂಶ ಪ್ರಸಾರ ಮಾಡದಂತೆ ಎಫ್ಎಂ ರೇಡಿಯೊಗಳಿಗೆ ಸಚಿವಾಲಯ ಸೂಚನೆ
ಹೊಸದಿಲ್ಲಿ, ಮಾ. 1: ಅಶ್ಲೀಲ ಹಾಗೂ ಆಕ್ಷೇಪಾರ್ಹ ಅಂಶಗಳನ್ನು ಪ್ರಸಾರ ಮಾಡದಂತೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಎಫ್ಎಂ ರೇಡಿಯೊಗಳಿಗೆ ನಿರ್ದೇಶಿಸಿದೆ. ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅದು ತಿಳಿಸಿದೆ. ‘‘ಹಲವು ಎಫ್ಎಂ ರೇಡಿಯೊಗಳು ಅಶ್ಲೀಲ ಹಾಗೂ ಆಕ್ಷೇಪಾರ್ಹ ಅಂಶಗಳನ್ನು ಆಗಾಗ ಪ್ರಸಾರ ಮಾಡುತ್ತಿರುವುದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಗಮನಕ್ಕೆ ಬಂದಿದೆ.
ಹಲವು ರೇಡಿಯೋ ಜಾಕಿಗಳು ಅಶ್ಲೀಲ, ದ್ವಂದ ಹಾಗೂ ಆಕ್ರಮಣಕಾರಿ ಭಾಷೆಯನ್ನು ಕೂಡ ಬಳಸುತ್ತಿದ್ದಾರೆ. ಅವರು ಮಾನಹಾನಿಕರ ಹೇಳಿಕೆಗಳನ್ನು ಸಾಮಾನ್ಯವಾಗಿ ನೀಡುತ್ತಿರುತ್ತಾರೆ. ಅದು ಉತ್ತಮ ಅಭಿರುಚಿ ಹೊಂದಿರುವುದಿಲ್ಲ’’ ಎಂದು ಸಚಿವಾಲಯ ತನ್ನ ಇತ್ತೀಚೆಗಿನ ಸಲಹೆಯಲ್ಲಿ ಹೇಳಿದೆ. ಇಂತಹ ಅಂಶಗಳ ಪ್ರಸಾರ ಅನುಮತಿ ನೀಡಿಕೆ ಒಪ್ಪಂದ (ಜಿಒಪಿಎ)ದ ಸಂಪೂರ್ಣ ಉಲ್ಲಂಘನೆಯಾಗಿದೆ.
ಆಲ್ ಇಂಡಿಯಾ ರೇಡಿಯೋ ಅನುಸರಿಸುವ ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆಯನ್ನೇ ಅನುಮತಿ ಪಡೆದುಕೊಂಡು ಎಫ್ಎಂ ರೇಡಿಯೋಗಳು ಕೂಡ ಅನುಸರಿಸಬೇಕು ಎಂದು ಸಚಿವಾಲಯ ತಿಳಿಸಿದೆ. ಎಲ್ಲ ಎಂಎಂ ರೇಡಿಯೋಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ನಿಯಮ ಉಲ್ಲಂಘಿಸಿ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಉಲ್ಲಂಘಿಸಿದ ಎಫ್ಎಂ ರೇಡಿಯೋಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.





