ಆದಿತ್ಯನಾಥ್ ರನ್ನು ಭವಿಷ್ಯದ ಪ್ರಧಾನಿ ಎಂದು ಜನರು ಉಲ್ಲೇಖಿಸುವುದು ಸಹಜ ಎಂದ ಅಮಿತ್ ಶಾ

ಅಮಿತ್ ಶಾ / ಆದಿತ್ಯನಾಥ್ (File Photo: PTI)
ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದರಿಂದ ಅವರನ್ನು ಜನರು ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಉಲ್ಲೇಖಿಸುವುದು ಸಹಜ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ.
indianexpress ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು "ಸಹಜವಾಗಿ ಜನರು ಆದಿತ್ಯನಾಥ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಣ್ಣಿಸುತ್ತಾರೆ. ಅವರ ಆಡಳಿತದಡಿಯಲ್ಲಿ ಬಹಳಷ್ಟು ಕೆಲಸಗಳಾಗಿವೆ. ಉತ್ತರ ಪ್ರದೇಶಕ್ಕೆ 30 ವೈದ್ಯಕೀಯ ಕಾಲೇಜುಗಳು ದೊರಕಿವೆ. ರಾಜ್ಯದಲ್ಲಿ ಎರಡು ಏಮ್ಸ್ ಹಾಗೂ ಎನ್ಸಿಫಾಲಿಟಿಸ್ಗಾಗಿ ಜಪಾನಿ ಸಂಶೋಧನಾ ಕೇಂದ್ರವನ್ನೂ ತೆರೆಯಲಾಗಿದೆ, ಬಿಜೆಪಿ ಸರಕಾರ 10 ವಿಶ್ವವಿದ್ಯಾಲಯಗಳು, 77 ಹೊಸ ಕಾಲೇಜುಗಳನ್ನು ನಿರ್ಮಿಸಿದೆ. ನಮ್ಮ ಸರಕಾರ ಉತ್ತರ ಪ್ರದೇಶದಾದ್ಯಂತ 1.40 ಲಕ್ಷ ಕಾಲೇಜುಗಳನ್ನು ಅಭಿವೃದ್ಧಿಪಡಿಸಿದೆ,'' ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕಳೆದ ಐದು ವರ್ಷಗಳಲ್ಲಿ ಆದಿತ್ಯನಾಥ್ ಸರಕಾರ ನಡೆಸಿದ ಉತ್ತಮ ಕಾರ್ಯಗಳಿಂದ ಬಿಜೆಪಿಯ ಬಲವರ್ಧನೆಯಾಗಿದೆ ಎಂದೂ ಶಾ ಹೇಳಿಕೊಂಡರು.
ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಗೆ ಯೋಗಿ ಸರಕಾರವನ್ನು ಶ್ಲಾಘಿಸಿದ ಅಮಿತ್ ಶಾ, "ಆದಿತ್ಯನಾಥ್ ಅವರು ಆದರ್ಶ ಜೀವನ ನಡೆಸಿದ್ದಾರೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕಳ್ಳತನ, ಡಕಾಯಿತಿ, ಅತ್ಯಾಚಾರ ಇತ್ಯಾದಿ ಅಪರಾಧಗಳಲ್ಲಿ ಶೇ 30ರಿಂದ 70ರಷ್ಟು ಇಳಿಕೆಯಾಗಿದೆ. ರಾಜ್ಯದಲ್ಲಿ ಈ ಹಿಂದೆ ಇಷ್ಟು ಉತ್ತಮ ರಸ್ತೆ ಇರಲಿಲ್ಲ. ರಾಜ್ಯದ ಪ್ರತಿ ಭಾಗವು ಎಕ್ಸ್ಪ್ರೆಸ್ವೇಯಿಂದ ಸಂಪರ್ಕಗೊಂಡಿದೆ. 22 ವರ್ಷಗಳ ನಂತರ ರಾಜ್ಯ ಪ್ರತಿ ದಿನ 12 ಗಂಟೆಗಿಂತ ಹೆಚ್ಚು ಕಾಲ ವಿದ್ಯುಚ್ಛಕ್ತಿ ಪಡೆಯುತ್ತಿದೆ,'' ಎಂದರು.







