ಕೊಲೆ ಪ್ರಕರಣ ಆರೋಪಿ ರಕ್ಷಣೆಗೆ ಯತ್ನ ಆರೋಪ: ಸಿಪಿಐ ಧನರಾಜ್ ಸೇವೆಯಿಂದ ಅಮಾನತು

ಸಿಪಿಐ ಧನರಾಜ್
ಮಳವಳ್ಳಿ: ಕೊಳ್ಳೇಗಾಲ ಮೂಲದ ಸಲೀಂ(40) ಕೊಲೆ ಪ್ರಕರಣ ಸಂಬಂಧ ಮಳವಳ್ಳಿ (ಹಲಗೂರು, ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿ) ಉಪವಿಭಾಗದ ಸರ್ಕಲ್ ಇನ್ಸ್ಪೆಕ್ಟರ್ ಧನರಾಜ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೋಮವಾರ ಸಂಜೆ ಆದೇಶ ಹೊರಡಿಸಿದ್ದು, ಸದರಿ ಸ್ಥಾನಕ್ಕೆ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ಕುಮಾರ್ ಅವರನ್ನು ಮಂಗಳವಾರ ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ.
ತಾಲೂಕಿನ ಪಂಡಿತಹಳ್ಳಿ ಸಮೀಪ ಫೆ.9ರಂದು ದೊರೆತಿದ್ದ ಅಪರಿಚಿತ ವ್ಯಕ್ತಿಯ ಶವ ಕೊಳ್ಳೇಗಾಲ ಮೂಲದ ಸಲೀಂ ಅವರದೆಂದು ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆಹಚ್ಚಿದ್ದರು. ಈ ಪ್ರಕರಣದಲ್ಲಿ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಡಾ.ಶ್ರೀಕಾಂತ್ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದರು.
ಈ ಹಿಂದೆ ಕೆ.ಆರ್.ಪೇಟೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿದ್ದ ವೇಳೆ ಆರೋಪಿ ಶ್ರೀಕಾಂತ್ಗೆ ಪರಿಚಿತವಿದ್ದ ಹಾಲಿ ಮಳವಳ್ಳಿ ಉಪವಿಭಾಗದ ಸಿಪಿಐ ಧನರಾಜ್, ಸಲೀಂ ಕೊಲೆ ಪ್ರಕರಣದ ಆರೋಪದಿಂದ ಶ್ರೀಕಾಂತ್ ಅವರನ್ನು ತಪ್ಪಿಸಲು ಯತ್ನಿಸಿದ್ದರು ಎಂಬ ಆರೋಪವಿತ್ತು.
ರೈಸ್ಪುಲ್ಲಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಮೂಲದ ಸಲೀಂ ಅವರನ್ನು ಮೈಸೂರಿನ ಇಲವಾಲದ ಬಳಿ ಕೊಲೆ ಮಾಡಿ ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಸಮೀಪ ರಸ್ತೆಬದಿ ಮೃತದೇಹವನ್ನು ಬಿಸಾಡಿ ಹೋಗಿದ್ದರು.
ಈ ಪ್ರಕರಣವನ್ನು ಬೇಧಿಸಿದ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು, ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಡಾ.ಶ್ರೀಕಾಂತ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು. ಸದರಿ ಪ್ರಕರಣದ ಆರೋಪದಿಂದ ಶ್ರೀಕಾಂತ್ ಅವರನ್ನು ತಪ್ಪಿಸಲು ಸಿಪಿಐ ಧನರಾಜ್ 10 ಲಕ್ಷ ರೂ. ಹಾಗೂ ಒಂದು ಕಾರು ಪಡೆದಿದ್ದರು ಎಂಬ ಆರೋಪ ಇದೆ.







