ಅಸ್ಸಾಂ: ಅಫ್ಸ್ಪಾ ಕಾಯ್ದೆ ಇನ್ನೂ 6 ತಿಂಗಳು ವಿಸ್ತರಣೆ
ಗುವಾಹಟಿ,ಮಾ.1: ವಿವಾದಾತ್ಮಕವಾದ ಸಶಸ್ತ್ರಪಡೆಗ ಳ ವಿಶೇಷಾಧಿಕಾರ ಕಾಯ್ದೆ, 1958 (ಎಎಫ್‌ಎಸ್‌ಪಿಎ)ಯನ್ನು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಇನ್ನೂ ಆರು ತಿಂಗಳುಗಳವರೆಗೆ ವಿಸ್ತರಿಸಲಾಗಿದೆ ಎಂದು ಅಸ್ಸಾಂ ಸರಕಾರ ಮಂಗಳವಾರ ತಿಳಿಸಿದೆ.
ಎಎಫ್‌ಎಸ್‌ಪಿಎ ಕಾಯ್ದೆಯು ಭದ್ರತಾ ಪಡೆಗಳಿಗೆ ಎಲ್ಲಿ ಬೇಕಾದರೂ ಕಾರ್ಯಾಚರಣೆಗಳನ್ನು ನಡೆಸಲು ಹಾಗೂ ಯಾವುದೇ ಪೂರ್ವಭಾವಿ ವಾರಂಟ್ ಇಲ್ಲದೆ ಬಂಧನಗಳನ್ನು ನಡೆಸಲು ಅಧಿಕಾರ ನೀಡುತ್ತದೆ. ಒಂದು ವೇಳೆ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಮಾದ ಉಂಟಾದಲ್ಲಿ ಭದ್ರತಾ ಪಡೆಗಳಿಗೆ ನಿರ್ದಿಷ್ಟ ಹಂತದವರೆಗೆ ಕಾನೂನುಕ್ರಮಕ್ಕೆ ಒಳಗಾಗುವುದರಿಂದ ವಿನಾಯಿತಿಯನ್ನು ನೀಡಲಾಗುತ್ತದೆ.
‘‘ಕಳೆದ ಆರು ತಿಂಗಳುಗಳಲ್ಲಿ ಅಸ್ಸಾಂನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಾಮರ್ಶಿಸಿದ ಬಳಿಕ ರಾಜ್ಯ ಸರಕಾರವು ಇಡೀ ಅಸ್ಸಾಂ ರಾಜ್ಯವನ್ನು ‘ಅಶಾಂತಿಯುತ ಪ್ರದೇಶ’ವೆಂದು 2002ರ ಫೆಬ್ರವರಿ 28ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳುಗಳವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ಮಂಗಳವಾರ ತಿಳಿಸಿದೆ.
ಅಸ್ಸಾಂ ಸರಕಾರವು ರಾಜ್ಯದ‘ಅಶಾಂತ ಪ್ರದೇಶ’ವೆಂಬ ಸ್ಥಾನಮಾನವನ್ನು ಕಳೆದ ವರ್ಷದ ಆಗಸ್ಟ್ 28ರಿಂದ ಆರು ತಿಂಗಳವರೆಗೆ ಅಫ್ಸ್ಪಾ ಕಾಯ್ದೆಯ ಹೇರಿಕೆಯನ್ನು ವಿಸ್ತರಿಸಿತ್ತು. ಫೆಬ್ರವರಿ 27ರಂದು ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಅಫ್‌ಸ್ಪಾ ಕಾಯ್ದೆಯನ್ನು ಮತ್ತೆ ಅರು ತಿಂಗಳವರೆಗೆ ವಿಸ್ತರಿಸಲಾಗಿದೆ .
ಐದು- ಆರು ಜಿಲ್ಲೆಗಳನ್ನು ಹೊರತುಪಡಿಸಿ ಅಸ್ಸಾಂನಿಂದ ಸೇನಾಪಡೆಗಳನ್ನು ವಸ್ತುಶಃ ಹಿಂತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತಾ ಬಿಶ್ವಾ ಶರ್ಮಾ ಅವರು ಜನವರಿ 1ರಂದು ತಿಳಿಸಿದ್ದರು. ಆದರೆ ಆಫ್ಸ್ಪಾ ಕಾಯ್ದೆಯನ್ನು ನವೀಕರಿಸುವ ವಿಚಾರದಲ್ಲಿ ರಾಜ್ಯ ಸರಕಾರವು ವಿವೇಕಯುತವಾದ ನಿರ್ಧಾರವನ್ನು ಕೈಗೊಳ್ಳುವುದಾಗಿ ಅವರು ಹೇಳಿದ್ದರು.
ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಿಂದ ಕರಾಳವಾದ ಅಫ್‌ಸ್ಪಾ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಿವಿಧ ನಾಗರಿಕ ಸಂಘಟನೆಗಳು ಹಾಗೂ ಮಾನವಹಕ್ಕು ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.







