ರಸ್ತೆ ಅಪಘಾತ; ಮಲ್ಪೆ ಕರಾವಳಿ ಕಾವಲು ಪಡೆ ಠಾಣೆಯ ಎಎಸ್ಐ ಗಣೇಶ್ ಪೈ, ಪುತ್ರಿ ಸ್ಥಳದಲ್ಲೇ ಮೃತ್ಯು

ಉಡುಪಿ: ಇಲ್ಲಿನ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಹಾಗೂ ಮಗಳು ದಾರುಣವಾಗಿ ಮೃತಪಟ್ಟಿದಾರೆ.
ಮೃತರನ್ನು ತೆಂಕನಿಡಿಯೂರಿನ ಗಣೇಶ್ ಪೈ (58) ಹಾಗೂ ಅವರ ಪುತ್ರಿ ಗಾಯತ್ರಿ ಪೈ (25) ಎಂದು ಗುರುತಿಸಲಾಗಿದೆ.
ಗಣೇಶ್ ಪೈ ಅವರು ಮಲ್ಪೆಯ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಗಾಯತ್ರಿಗೆ ಮದುವೆಯಾಗಿ 1 ವರ್ಷ ಆಗಿದ್ದು ಗದಗದಲ್ಲಿರುವ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಆಕೆಯನ್ನು ಗಣೇಶ್ ಪೈ ಅವರು ಮನೆಗೆ ಕರೆದುಕೊಂಡು ಬರಲು ಸಂತೆಕಟ್ಟೆಗೆ ಸ್ಕೂಟರ್ ನಲ್ಲಿ ತೆರಳಿದ್ದರು.
ಅಲ್ಲಿ ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕುಳ್ಳಿರಿಸಿ ಮನೆಗೆ ಹೊರಡಲು ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡುವ ಸಂದರ್ಭ ಕೇರಳದಿಂದ ಕೊಲ್ಲೂರಿಗೆ ಹೋಗುತ್ತಿದ್ದ ಕೇರಳದ ಸಾರಿಗೆ ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.