24 ಗಂಟೆಗಳಲ್ಲಿ 1, 377 ಭಾರತೀಯರನ್ನು ಸ್ಥಳಾಂತರಿಸಲಾಗಿದೆ, ಕೀವ್‌ನಲ್ಲಿ ಯಾವುದೇ ನಾಗರಿಕ ಉಳಿದಿಲ್ಲ: ಕೇಂದ್ರ

ಹೊಸದಿಲ್ಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,377 ನಾಗರಿಕರನ್ನು ಯುದ್ಧಪೀಡಿತ ಉಕ್ರೇನ್‌ನಿಂದ ಸ್ಥಳಾಂತರಿಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ತಿಳಿಸಿದ್ದಾರೆ.
"ಕಳೆದ 24 ಗಂಟೆಗಳಲ್ಲಿ ಪೋಲೆಂಡ್‌ನಿಂದ ಮೊದಲ ವಿಮಾನವು ಸೇರಿದಂತೆ ಆರು ವಿಮಾನಗಳು ಈಗ ಭಾರತಕ್ಕೆ ಹೊರಟಿವೆ. ಉಕ್ರೇನ್‌ನಿಂದ 1,377 ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲಾಗುತ್ತಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಉಕ್ರೇನ್‌ನಲ್ಲಿರುವ ನಾಗರಿಕರನ್ನು ಭಾರತಕ್ಕೆ ಕರೆತರಲು ಆರಂಭಿಸಲಾದ ಆಪರೇಷನ್ ಗಂಗಾ ಅಡಿಯಲ್ಲಿ ಭಾರತವು ಮುಂದಿನ ಮೂರು ದಿನಗಳಲ್ಲಿ 26 ಕ್ಕೂ ಹೆಚ್ಚು ವಿಮಾನಗಳನ್ನು ಬಳಸಿಕೊಳ್ಳಲಿದೆ. ಉಕ್ರೇನ್‌ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ರೊಮೇನಿಯಾ, ಹಂಗೇರಿ, ಪೋಲೆಂಡ್ ಮತ್ತು ಸ್ಲೋವಾಕ್ ಗಣರಾಜ್ಯದ ವಿಮಾನ ನಿಲ್ದಾಣಗಳನ್ನು ಭಾರತೀಯರನ್ನು ಕರೆತರಲು ಬಳಸಲಾಗುತ್ತಿದೆ.
ಭಾರತೀಯ ವಾಯುಪಡೆಯು ಗಂಗಾ ಕಾರ್ಯಾಚರಣೆಯ ಭಾಗವಾಗಿ ಸಿ-17 ವಿಮಾನವನ್ನು ರೊಮೇನಿಯಾಗೆ ಕಳುಹಿಸಿದೆ.
ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಯಾವುದೇ ಭಾರತೀಯ ನಾಗರಿಕ ಉಳಿದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.





