ಆಳಂದ: ಪೊಲೀಸ್ ಕಾರ್ಯಾಚರಣೆ ವೇಳೆ ಮಹಿಳೆ ಸೇರಿ ಇಬ್ಬರು ಮೃತ್ಯು; ಕುಟುಂಬ ಸದಸ್ಯರ ಆರೋಪ
ಆರೋಪ ನಿರಾಕರಿಸಿದ ಪೊಲೀಸರು

ಸೂಫಿಯಾ ಬೇಗಂ, ಫಾರೂಕ್ ಅನ್ಸಾರಿ
ಕಲಬುರಗಿ: ಆಳಂದ ಪಟ್ಟಣದಲ್ಲಿ ಸೆಕ್ಷನ್ 144 ಉಲ್ಲಂಘಿಸಿದ ಆರೋಪದಲ್ಲಿ ಇಂದು ಬೆಳಗ್ಗೆ 4 ಗಂಟೆಯಿಂದ ಪೊಲೀಸರು ಹಲವರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ನಡೆದಿದೆ.
ನ್ಯೂ ಅನ್ಸಾರಿ ಬಡಾವಣೆಯ ನಿವಾಸಿ ಸೂಫಿಯಾ ಬೇಗಂ (41) ಎಂಬ ಮಹಿಳೆ ಮತ್ತು ಇಲ್ಲಿನ ಪೊಲೀಸ್ ಠಾಣೆಯ ಹತ್ತಿರದ ಅನ್ಸಾರಿ ಬಡಾವಣೆಯ ನಿವಾಸಿ ಫಾರೂಕ್ ಅನ್ಸಾರಿ (78) ಮೃತರು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಪೊಲೀಸರು ಮನೆಯ ಬಾಗಿಲು ತಟ್ಟಿ ದಾಂಧಲೆ ನಡೆಸಿದ ಶಬ್ದಕ್ಕೆ ಆಘಾತಗೊಂಡು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇದೀಗ ಪೊಲೀಸರ ಕಾರ್ಯಾಚರಣೆ ಪಟ್ಟಣದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
''ಕಾರ್ಯಾಚರಣೆ ವೇಳೆ ನಾವು ಯಾವುದೇ ತೊಂದರೆ ನೀಡಿಲ್ಲ, ಅವರು ವಯಸ್ಸಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ಸ್ಥಳೀಯರು ಮಾತ್ರ ಆರೋಪ ಮಾಡುತ್ತಿದ್ದಾರೆ''.
- ತಿರುಮಲ, ಪಿಎಸ್ಐ ಆಳಂದ ಪೊಲೀಸ್ ಠಾಣೆ.







