ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿ ರಾಜ್ಯದ ಎಲ್ಲರನ್ನೂ ವಾರದೊಳಗೆ ಕರೆತರಲಾಗುವುದು: ಸಂಸದ ನಳಿನ್ ಕುಮಾರ್

ಮಂಗಳೂರು, ಮಾ.2: ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಎಲ್ಲರನ್ನೂ ಒಂದು ವಾರದೊಳಗೆ ಸುರಕ್ಷಿತವಾಗಿ ಕರೆತರಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಭರವಸೆ ನೀಡಿದ್ದಾರೆ.
ಅವರು ಇಂದು ಉಕ್ರೇನ್‌ನಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಮಂಗಳೂರು ಮೂಲದ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರ ಪೋಷಕರನ್ನು ಭೇಟಿಯಾಗಿ ಮಾತನಾಡಿದರು.
ಉಕ್ರೇನ್‌ನಿಂದ ಸದ್ಯ ಪಾರಾಗಿ ರೊಮಾನಿಯಾದ ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿರುವ ಮಂಗಳೂರು ಬಿಜೈ ನಿವಾಸಿ ವಿದ್ಯಾರ್ಥಿನಿಯರಾದ ಅನುಷಾ ಮತ್ತು ಸಾಕ್ಷಿ ಸುಧಾಕರ್ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರ ಜತೆ ಮಾತುಕತೆ ನಡೆಸಿದರು.
ಸರಕಾರದ ಅಂಕಿ ಅಂಶಗಳ ಪ್ರಕಾರ ದ.ಕ. ಜಿಲ್ಲೆಯ 18 ಮಂದಿ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿದ್ದು, ಅವರಲ್ಲಿ 12 ಮಂದಿ ಮಂಗಳೂರಿನವರಾಗಿದ್ದಾರೆ. ಈಗಾಗಲೇ ಅವರ ಮನೆಯವರು ಮತ್ತು ವಿದ್ಯಾರ್ಥಿಗಳ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇವೆ. ಉಕ್ರೇನಲ್ಲಿರುವ ಎಲ್ಲರನ್ನೂ ಸುರಕ್ಷಿತವಾಗಿ ಕರೆ ತರುವ ನಿಟ್ಟಿನಲ್ಲಿ ಸಚಿವರನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಕೆಲವರು ಈಗಾಗಲೇ ವಿಮಾನ ಹತ್ತಿದ್ದರೆ ಮತ್ತೆ ಕೆಲವರು ಬಂಕರ್‌ಗಳಲ್ಲಿಯೇ ಇದ್ದಾರೆ. ಪಕ್ಷದ ವತಿಯಿಂದಲೂ ವಾರ್ ರೂಂ ತೆರೆದು ಮನೆಯವರ ಸಂಪರ್ಕ ಮಾಡಲಾಗುತ್ತಿದೆ. ಮಂಗಳೂರು ನಗರದ ಐದು ಕುಟುಂಬದ ಬಳಿ ತೆರಳಿ ಅವರಿಗೆ ವಿಶ್ವಾಸ ತುಂಬಿದ್ದೇವೆ. ನಿನ್ನೆ ಅಹಿತಕರ ಮತ್ತು ದುಃಖದ ಘಟನೆ ಉಕ್ರೇನ್‌ನಲ್ಲಿ ನಡೆದಿದೆ. ನವೀನ್ ಎಂಬ ಯುವಕ ಬಾಂಬ್ ದಾಳಿಗೆ ಮೃತನಾಗಿರೋದು ಬೇಸರದ ವಿಚಾರ. ಆ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಸಿಗಲಿ. ಯಾರೂ ಭಯಪಡಬೇಕಾಗಿಲ್ಲ. ಸರಕಾರ ನಿಮ್ಮ ಜತೆಗಿದೆ ಎಂದು ಅವರು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡಾ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಕ್ರಮ ವಹಿಸಿದ್ದಾರೆ. ನಿನ್ನೆ ಘಟನೆ ಬಳಿಕ ತಕ್ಷಣ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಹಾಗೂ ಸಚಿವ ಜೈಶಂಕರ್ ಅವರ ಜತೆ ಮಾತನಾಡಿದ್ದೇನೆ.
ಪಾಸ್‌ಪೋರ್ಟ್ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗದು ಎಂದು ಪ್ರಧಾನಿ ಹೇಳಿದ್ದು, ಕೆಲವರು ಪಾಸ್ ಪೋರ್ಟ್ ಕಳೆದುಕೊಂಡಿರೋ ಘಟನೆಯೂ ನಡೆದಿದೆ. ಕೆಲವು ಏಜೆಂಟ್ ಗಳು ಹುಟ್ಟಿಕೊಂಡಿದ್ದು, ತಲುಪಿಸುವ ಡಿಮಾಂಡ್ ಬೇರೆ ಮಾಡುತ್ತಿದ್ದಾರೆ. ಅಂತಹ ಯಾವುದೇ ಪ್ರಮೇಯ ಇಲ್ಲದೆ ಸುರಕ್ಷಿತವಾಗಿ ಎಲ್ಲರನ್ನೂ ಕರೆತರಲಾಗುವುದು ಎಂದು ಅವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ಜಗದೀಶ ಶೇಣವ, ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.