'ಭಾರತದ ಹೆಚ್ಚುತ್ತಿರುವ ಶಕ್ತಿಯಿಂದಾಗಿ ಉಕ್ರೇನ್ ನಿಂದ ನಮ್ಮ ನಾಗರಿಕರ ಸ್ಥಳಾಂತರ ಸಾಧ್ಯವಾಯಿತು': ಪ್ರಧಾನಿ ಮೋದಿ

ಲಕ್ನೊ:, 'ಭಾರತದ ಹೆಚ್ಚುತ್ತಿರುವ ಶಕ್ತಿಯಿಂದಾಗಿ ನಾವು ಉಕ್ರೇನ್‌ನಿಂದ ನಮ್ಮ ನಾಗರಿಕರನ್ನು ಸ್ಥಳಾಂತರಿಸಲು ಸಾಧ್ಯವಾಯಿತು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಉತ್ತರಪ್ರದೇಶದ ಸೋನಭದ್ರದಲ್ಲಿ ವಿಧಾನಸಭಾ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಈ ಮಾತು ಹೇಳಿದ್ದಾರೆ. ಉಕ್ರೇನ್‌ನಿಂದ ನಾಗರಿಕರನ್ನು ಮನೆಗೆ ಕರೆತರಲು ಭಾರತ ಎಲ್ಲ ಪ್ರಯತ್ನವನ್ನು ಮಾಡಲಿದೆ ಎಂದು ಅವರು ಹೇಳಿದರು.
ಉಕ್ರೇನ್ ಮೇಲೆ ರಶ್ಯ ಯುದ್ದ ಸಾರಿದ್ದರಿಂದಾಗಿ ಆ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ತೆರವುಗೊಳಿಸಲಾಗುತ್ತಿದ್ದು, ಇಂತಹ ಸಂದರ್ಭವನ್ನು ಚುನಾವಣಾ ಪ್ರಚಾರದ ವಸ್ತುವನ್ನಾಗಿಸಿಕೊಳ್ಳುತ್ತಿರುವ ಬಿಜೆಪಿಯ ಕುರಿತಾಗಿ ಟಿಎಂಸಿ ಹಿರಿಯ ನಾಯಕ ಯಶವಂತ ಸಿನ್ಹಾ ಈಗಾಗಲೇ ತೀವ್ರವಾಗಿ ಟೀಕಿಸಿದ್ದಾರೆ.
‘ಸಶಸ್ತ್ರ ಪಡೆಗಳ ಶೌರ್ಯ ಹಾಗೂ ‘ಮೇಕ್ ಇನ್ ಇಂಡಿಯಾ’ವನ್ನು ಪ್ರಶ್ನಿಸುವವರು ದೇಶವನ್ನು ಬಲಿಷ್ಠಗೊಳಿಸಲಾರರು’ ಎಂದು ಪ್ರತಿಪಕ್ಷಗಳ ವಿರುದ್ಧ ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.
ರಾಜ್ಯ ಚುನಾವಣೆಗಳ ಬಿರುಸಿನ ಪ್ರಚಾರದ ಮಧ್ಯದಲ್ಲಿ ಉಕ್ರೇನ್ ಬಿಕ್ಕಟ್ಟು ಹಾಗೂ ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪರದಾಟವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರಕಾರದ ಮೇಲೆ ವಾಗ್ದಾಳಿಯನ್ನು ನಡೆಸುತ್ತಿವೆ.
ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಕುರಿತು ಪ್ರಧಾನಿ ಮೋದಿ ಮೂರು ದಿನಗಳಲ್ಲಿ ನಾಲ್ಕು ಸಭೆಗಳನ್ನು ನಡೆಸಿದ್ದಾರೆ.







