ಆರ್ಯನ್ ಖಾನ್ಗೂ ಅಂತರಾಷ್ಟ್ರೀಯ ಡ್ರಗ್ಸ್ ಜಾಲಕ್ಕೂ ನಂಟು ಆರೋಪ ಕುರಿತು ನಮಗೆ ಸಾಕ್ಷ್ಯ ದೊರಕಿಲ್ಲ ಎಂದ ಎಸ್ಐಟಿ

FIle Photo: PTI
ಮುಂಬೈ: ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಅಂತರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣಿಕೆ ಜಾಲದ ಜತೆ ನಂಟು ಹೊಂದಿದ್ದರೆಂಬ ಆರೋಪ ಕುರಿತಂತೆ ಯಾವುದೇ ಸಾಕ್ಷ್ಯವು ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋದ ವಿಶೇಷ ತನಿಖಾ ತಂಡಕ್ಕೆ ದೊರಕಿಲ್ಲ ಎಂದು ತಿಳಿದು ಬಂದಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಎನ್ಸಿಬಿಯು ಕೊರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ಸಂದರ್ಭ ಹಲವಾರು ಲೋಪದೋಷಗಳೂ ಸಂಭವಿಸಿರುವ ಕುರಿತಂತೆ ಎಸ್ಐಟಿ ವರದಿ ಹೇಳಿದೆಯೆನ್ನಲಾಗಿದೆ.
ಆರ್ಯನ್ ಖಾನ್ ಅವರ ಫೋನ್ ವಶಪಡಿಸಿಕೊಂಡು ಅವರ ಚಾಟ್ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ, ಏಕೆಂದರೆ ಅವರು ಡ್ರಗ್ಸ್ ಹೊಂದಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಇದು ಮುಂಬೈ ಎನ್ಸಿಬಿ ಘಟಕದ ಆರೋಪಗಳಿಗೆ ತದ್ವಿರುದ್ಧವಾಗಿದೆಯೆಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಕ್ರೂಸ್ ಹಡಗಿನ ಮೇಲೆ ಎನ್ಸಿಬಿ ದಾಳಿ ನಡೆಸಿದ ಸಂದರ್ಭ ನಿಯಮದಂತೆ ವೀಡಿಯೋ ಚಿತ್ರೀಕರಣ ನಡೆಸಲಾಗಿಲ್ಲ ಎಂದೂ ತನಿಖಾ ವರದಿ ಹೇಳಿದೆ.
ಪ್ರಕರಣದ ಹಲವು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದ ಡ್ರಗ್ಸ್ ಅನ್ನು ಒಟ್ಟುಗೂಡಿಸಿ ಹೇಳಲಾಗಿದೆ ಎಂದೂ ತಿಳಿದು ಬಂದಿದೆ.
ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಅಂತಿಮ ವರದಿ ಸಲ್ಲಿಕೆಗೆ ಇನ್ನೂ ಎರಡು ತಿಂಗಳು ಬೇಕಾದೀತೆಂದು ಹೇಳಲಾಗಿದೆ. ಎನ್ಸಿಬಿಯ ಮಾಜಿ ಮುಂಬೈ ವಲಯದ ಮಾಜಿ ನಿರ್ದೇಶಕ ಸಮಿರ್ ವಾಂಖೇಡೆ ಅವರ ನೇತೃತ್ವದಲ್ಲಿ ನಡೆದ ದಾಳಿಯ ಬಗ್ಗೆ ಎಸ್ಐಟಿ ತನಿಖೆ ಹಲವು ಪ್ರಶ್ನೆಗಳನ್ನೆತ್ತಿದೆ ಎನ್ನಲಾಗಿದೆ.







