ಲಂಚ ಸ್ವೀಕರಿಸಿದ ಆರೋಪ: ವಾಣಿಜ್ಯ ತೆರಿಗೆ ಅಧಿಕಾರಿಗೆ ಜೈಲು ಶಿಕ್ಷೆ ಖಾಯಂಗೊಳಿಸಿ ಆದೇಶಿಸಿದ ಹೈಕೋರ್ಟ್

ಬೆಂಗಳೂರು, ಮಾ.2: ಹದಿಮೂರು ವರ್ಷಗಳ ಹಿಂದೆ ಐದು ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಪದ್ಮನಾಭನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 4 ವರ್ಷದ ಜೈಲುಶಿಕ್ಷೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಭ್ರಷ್ಟಾಚಾರ ನಿಗ್ರಹ(ಪಿಸಿ) ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಜೈಲುಶಿಕ್ಷೆ ವಿಧಿಸಿದ್ದ ವಿಜಯಪುರ ವಿಶೇಷ ನ್ಯಾಯಾಲಯದ ಆದೇಶ ರದ್ದುಕೋರಿ ಪದ್ಮನಾಭ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಪೀಠ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಅಲ್ಲದೆ, ಶಿಕ್ಷೆಯ ಅವಧಿ ಪೂರ್ಣಗೊಳಿಸುವುದಕ್ಕಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಲು ಆರೋಪಿಗೆ ಮಾ.15ರವರೆಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.
ಭ್ರಷ್ಟಾಚಾರದ ತಾಣ: ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ನ್ಯಾಯಪೀಠ, ವಾಣಿಜ್ಯ ತೆರಿಗೆ ಕಚೇರಿಯು ಭ್ರಷ್ಟಾಚಾರದ ಕೂಪಗಳಲ್ಲಿ ಒಂದಾಗಿದೆ ಎಂಬ ಖ್ಯಾತಿ ಪರಿಗಣಿಸಲ್ಪಟ್ಟಿದೆ. ಪ್ರತಿದಿನ ಬಡ ಮತ್ತು ಅಸಕ್ತ ಚಾಲಕರು ಕಾನೂನುಬಾಹಿರ ಬೇಡಿಕೆಗಳಿಗೆ ಸಿಲುಕಿ ಲಂಚ ನೀಡುತ್ತಲೇ ಇರುತ್ತಾರೆ. ಲಂಚಕೋರರ ದುರಾಸೆ ಹೆಚ್ಚಾದಾಗ ಮೇಲಿನ ಅಧಿಕಾರಿಗಳಿಗೆ ದೂರು ನೀಡುವ ಅಥವಾ ಲೋಕಾಯುಕ್ತರ ಮೊರೆ ಹೋಗುವ ಕೆಲಸವಾಗುತ್ತದೆ. ಹಲವು ಸಂದರ್ಭದಲ್ಲಿ ಸಂಧಾನದಲ್ಲಿ ಲಂಚಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಾಗುತ್ತದೆ ಎಂದು ಹೇಳಿದೆ.
ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ಭ್ರಷ್ಟಾಚಾರವೆಸಗಲು ಹಲವು ಕಾರಣಗಳಿರಬಹುದು. ಆದರೆ ಮುಗ್ಧರನ್ನು ರಕ್ಷಿಸುವುದು ಮತ್ತು ಅಪರಾಧಿಗಳಿಗೆ ಶಿಕ್ಷಿಸುವುದು ನ್ಯಾಯಾಲಯಗಳ ಕರ್ತವ್ಯ ಮತ್ತು ಜವಾಬ್ದಾರಿ. ಹೀಗಾಗಿ, ನಿಜವಾದ ಅಪರಾಧಿಗಳು ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಬಿಡಬಾರದು, ಅಂತಹ ಪ್ರಯತ್ನಗಳನ್ನು ಅಲ್ಲಲ್ಲೇ ಮಟ್ಟ ಹಾಕಲು ಪ್ರಯತ್ನಗಳನ್ನು ಮಾಡಬೇಕು ಎಂದು ಆದೇಶಿಸಿದೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೆಲವೇ ಕೆಲವು ಪ್ರಕರಣಗಳು ಮಾತ್ರ ತಾರ್ಕಿತ ಅಂತ್ಯ ಕಾಣುತ್ತವೆ. ಆದರೆ ಬಹುತೇಕ ಪ್ರಕರಣಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಆರಂಭದಲ್ಲಿ ಪ್ರಾಸಿಕ್ಯೂಷನ್ ಅತ್ಯುತ್ಸಾಹದಿಂದ ಹೆಜ್ಜೆ ಇಟ್ಟರೂ ಅವರಿಗೆ ದೂರುದಾರರು ಮತ್ತು ಸಾಕ್ಷಿಗಳಿಂದ ಅಗತ್ಯ ಬೆಂಬಲ ದೊರೆಯದೇ ಆರೋಪಿಗಳು ಖುಲಾಸೆಯಾಗುತ್ತಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ನಾನಾ ಕಲಂಗಳಡಿ ದಾಖಲಿಸಿರುವ ಪ್ರಕರಣಗಳನ್ನು ರಾಷ್ಟ್ರೀಯ ಅಪರಾಧ ಬ್ಯುರೊ ಪ್ರಕಟಿಸಿರುವ ಪಟ್ಟಿಯಲ್ಲಿ ನೋಡಿದರೆ ನಿರಾಸೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು: ವಿಜಯಪುರ ಜಿಲ್ಲೆಯ ಧುಲ್ಖೇಡ್ ಚೆಕ್ ಪೋಸ್ಟ್ ಬಳಿ 40 ಲಕ್ಷ ರೂಪಾಯಿ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಲಾರಿ ಬಿಡುಗಡೆ ಮಾಡಲು ವಾಣಿಜ್ಯ ತೆರಿಗೆ ಅಧಿಕಾರಿಗಳು 2008ರ ಡಿಸೆಂಬರ್‍ನಲ್ಲಿ 15 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಸ್ಟೀಲ್ ಕಂಪೆನಿಯ ಯೋಜನಾ ವ್ಯವಸ್ಥಾಪಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಲಂಚದ ಬೇಡಿಕೆ ಐದು ಲಕ್ಷ ರೂಪಾಯಿಗಳಿಗೆ ಇಳಿಸಲಾಗಿತ್ತು.
ವಾಣಿಜ್ಯ ಅಧಿಕಾರಿ ಪದ್ಮನಾಭ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ನೇರವಾಗಿ ಸಿಕ್ಕಿ ಬಿದ್ದಿದ್ದರು. 2015ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸ್ಥಾಪಿಸಲಾಗಿರುವ ವಿಜಯಪುರದ ವಿಶೇಷ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಅಲ್ಲದೇ ಸೆಕ್ಷನ್ 7ರ ಅಡಿ ಎರಡೂವರೆ ವರ್ಷ ಜೈಲು ಶಿಕ್ಷೆ ಮತ್ತು ಸೆಕ್ಷನ್ 13(1) (ಡಿ) ಅಡಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಎರಡೂ ಶಿಕ್ಷೆಗಳು ಒಟ್ಟಾಗಿ ಜಾರಿಯಾಗಲಿವೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪದ್ಮನಾಭ ಹೈಕೋರ್ಟ್ ಮೊರೆ ಹೋಗಿದ್ದರು.







