ನೀಟ್ ಬಂದಮೇಲೆ ಮೆಡಿಕಲ್ ಸೀಟುಗಳು ಹಿಂದಿ ರಾಜ್ಯಗಳ ಪಾಲಾಗುತ್ತಿದೆ: ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್
''ಮೃತ ನವೀನ್ ಗೆ ಮೆಡಿಕಲ್ ಸೀಟು ಸಿಗದಿದ್ದಕ್ಕೆ ಕಾರಣ #NEET ಪರೀಕ್ಷೆ''

ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್
ಬೆಂಗಳೂರು: ಉಕ್ರೇನ್ ಸಂಘರ್ಷದಲ್ಲಿ ಭಾರತೀಯ ಸಿಲುಕಿಕೊಂಡ ಮೇಲೆ, ಅದರಲ್ಲೂ ಕನ್ನಡಿಗ ವಿದ್ಯಾರ್ಥಿ ಶೆಲ್ ದಾಳಿಗೆ ಮೃತ ಪಟ್ಟ ಬಳಿಕ, ನೀಟ್ ಪರೀಕ್ಷೆ ಬಗೆಗಿನ ಚರ್ಚೆಗಳು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್, ನೀಟ್ ಬಂದಮೇಲೆ ಮೆಡಿಕಲ್ ಸೀಟುಗಳು ಹಿಂದಿಯನ್ ರಾಜ್ಯಗಳ ಪಾಲಾಗುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಅಧಿಕೃತ ಫೇಸ್ಬುಕ್ ಖಾತೆ ಮೂಲಕ ಪ್ರತಿಕ್ರಿಯಿಸಿದ ಅವರು, ʼಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳ ಸಂಖ್ಯೆ 60 .ಉತ್ತರ ಪ್ರದೇಶದಲ್ಲಿರುವ ಮೆಡಿಕಲ್ ಕಾಲೇಜುಗಳ ಸಂಖ್ಯೆ 55. ಕರ್ನಾಟಕದ ಜನಸಂಖ್ಯೆ 6.4 ಕೋಟಿಯಾದರೆ, ಉತ್ತರಪ್ರದೇಶದ ಜನಸಂಖ್ಯೆ 20.4 ಕೋಟಿ. ಕರ್ನಾಟಕದ ಮೂರು ಪಟ್ಟು ಜನಸಂಖ್ಯೆಗೂ ಹೆಚ್ಚು. ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳು ಕನ್ನಡಿಗರಿಗೆ ಸಾಕಾಗುತ್ತಿದ್ದವು. ನೀಟ್ ಬಂದಮೇಲೆ ಸೀಟುಗಳು ಹಿಂದಿಯನ್ ರಾಜ್ಯಗಳ ಪಾಲಾಗುತ್ತಿವೆʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
' 75 ವರ್ಷಗಳ ಕಾಲ ನಾವು ಕಷ್ಟಪಟ್ಟು ಕಟ್ಟಿಕೊಂಡ ಸೌಕರ್ಯಗಳನ್ನು NEET ನಿಂದಾಗಿ ಬೇರೆಯವರಿಗೆ ಬಿಟ್ಟುಕೊಡುವಂತಾಯಿತು! ಕನ್ನಡಿಗರ ಜಾಗ, ಕನ್ನಡಿಗರ ದುಡ್ಡು, ಕರ್ನಾಟಕದ ಮೂಲಭೂತ ಸೌಕರ್ಯಗಳು, ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.'ನವೀನ್ ನಂತ ಬುದ್ಧಿವಂತ ಹುಡುಗ ದ್ವಿತೀಯ ಪಿಯುಸಿಯಲ್ಲಿ 97% ತೆಗೆದರೂ ನಮ್ಮ ಕರ್ನಾಟಕದಲ್ಲಿ ಅವನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ. ಅದಕ್ಕೆ ಕಾರಣ #NEET ಪರೀಕ್ಷೆ. ಈ #Neet ಪರೀಕ್ಷೆಯಿಂದ ನಮ್ಮ ಕರ್ನಾಟಕದ ಮಕ್ಕಳಿಗೆ ಅನ್ಯಾಯವಾಗಿದೆ. ಈ #NEET ಪರೀಕ್ಷೆಯನ್ನು ಮೊದಲು ರದ್ದುಮಾಡಿ ನಮ್ಮ ಕರ್ನಾಟಕದ #CET ಯನ್ನು ಮರುಸ್ಥಾಪಿಸಬೇಕಾಗಿದೆ' ಎಂದು ಅವರು ಒತ್ತಾಯಿಸಿದ್ದಾರೆ.
"ಪಿಯುಸಿಯಲ್ಲಿ 97% ಅಂಕ ಗಳಿಸಿದ್ದರೂ ನಮ್ಮ ರಾಜ್ಯದಲ್ಲಿ ನನ್ನ ಮಗನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ. ಮೆಡಿಕಲ್ ಸೀಟ್ ಸಿಗಬೇಕಾದರೆ ಒಬ್ಬೊಬ್ಬರೂ ಕೋಟಿಗಟ್ಟಲೆ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಶಿಕ್ಷಣವನ್ನು ಮಕ್ಕಳು ವಿದೇಶದಲ್ಲಿ ಕಡಿಮೆ ಖರ್ಚಿನಲ್ಲಿ ಪಡೆಯುತ್ತಾರೆ" ಎಂದು ಉಕ್ರೇನ್ ನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ತಂದೆ ಹೇಳಿರುವುದನ್ನು ಇಲ್ಲಿ ನೆನಪಿಸಬಹುದು.







