ಬೆಂಗಳೂರು: ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.2: ಪೊಲೀಸರ ಸೋಗಿನಲ್ಲಿ ಸ್ಪಾಗಳಿಗೆ ನುಗ್ಗಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಗೃಹರಕ್ಷಕ ಸಿಬ್ಬಂದಿ ಸೇರಿ ಐವರನ್ನು ಬಂಧಿಸುವಲ್ಲಿ ರಾಮಮೂರ್ತಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾವಲ್ ಬೈರಸಂದ್ರದ ಕಲೀಂ(28), ಗೃಹರಕ್ಷಕರಾದ ಡಿಜೆಹಳ್ಳಿಯ ಸಂಪಂಗಿರಾಮ್(31), ಅಸೀಫ್(27), ಆನಂದ್ ರಾಜ್(30), ವಿನಾಯಕ್(28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಆರೋಪಿ ಸಂಪಂಗಿರಾಮ್, ಗೋವಿಂದಪುರ ಠಾಣೆ ಹಾಗೂ ಕೆಜಿ ಹಳ್ಳಿ ಎಸಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಉಳಿದ ಮೂವರು ಹೆಣ್ಣೂರು, ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದರು.
ಆರೋಪಿಗಳು ರಾಮಮೂರ್ತಿನಗರದ ಜಯಂತಿನಗರ ಮುಖ್ಯ ರಸ್ತೆಯ ಆಲಯ್ಯಾ ಸೆಲೂನ್ ಆಂಡ್ ಸ್ಪಾಗೆ ಫೆ.16ರಂದು ನುಗ್ಗಿ ತಾವೂ ಪೊಲೀಸರು, ಪತ್ರಿಕೆ ವರದಿಗಾರ ಎಂದು ಹೇಳಿಕೊಂಡು ಗುರುತಿನ ಪತ್ರ ತೋರಿಸಿ ಅರವತ್ತು ಸಾವಿರ ನಗದು, ಫೋನ್ ಪೇ ಗೂಗಲ್ ಪೇ ಮೂಲಕ 1 ಲಕ್ಷ ರೂ., ಹಣ ಪಡೆದಿದ್ದರು. ಬಳಿಕವೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ನಾವು, ಕ್ರೈಂ ದಳದ ಪೊಲೀಸರು ಎಂದು ಸ್ಪಾಗೆ ನುಗ್ಗಿ, ಇಲ್ಲಿ ವೇಶ್ಯವಾಟಿಕೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಹೆದರಿಸಿ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.







