ಉಕ್ರೇನ್ ನಲ್ಲಿ ನವೀನ್ ಸಾವಿಗೆ ನೀಟ್ ಕಾರಣ: ಟಿ.ಎ. ನಾರಾಯಣಗೌಡ

ಬೆಂಗಳೂರು, ಮಾ.2: ರಾಜ್ಯದಲ್ಲಿ ಮೆಡಿಕಲ್ ಸೀಟು ಸಿಗದ ಕಾರಣ, ಕನ್ನಡದ ಹುಡುಗ ನವೀನ್ ಶೇಖರಪ್ಪ ಉಕ್ರೇನ್‍ಗೆ ಹೋಗಿ ವೈದ್ಯಕೀಯ ವ್ಯಾಸಂಗದಲ್ಲಿ ತೊಡಗಿದ್ದು, ರಶ್ಯಾ ಪಡೆಗಳ ಬಾಂಬ್ ದಾಳಿಗೆ ಸಿಲುಕಿ ಕೊಲೆಗೀಡಾಗಿದ್ದಾನೆ. ಈ ಸಾವಿನ ಹೊಣೆ ಹೊರುವವರು ಯಾರು ಎಂದು ಕರ್ನಾಟಕ ರಕ್ಷಣ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಸ್ವಾತಂತ್ರ್ಯಾನಂತರ ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ದೇಶದ ಇತರೆಲ್ಲ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ ಸಾಧನೆ ಮಾಡಿದೆ. ರಾಜ್ಯದಲ್ಲಿ ಒಟ್ಟು 69 ಮೆಡಿಕಲ್ ಕಾಲೇಜುಗಳಿವೆ. ಆದರೆ ಕನ್ನಡಿಗರಿಗೆ ಮೆಡಿಕಲ್ ಸೀಟು ಸಿಗುತ್ತಿಲ್ಲ. ನೀಟ್ ಹೆಸರಲ್ಲಿ ರಾಜ್ಯಕ್ಕೆ ವಂಚನೆಯಾಗುತ್ತಿದೆ ಎಂದು ಖಂಡಿಸಿದ್ದಾರೆ.
21 ಕೋಟಿ ಜನಸಂಖ್ಯೆಯ ಉತ್ತರಪ್ರದೇಶ ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ಮೆಡಿಕಲ್ ಕಾಲೇಜುಗಳು ಇಲ್ಲ. ಹಾಗಾಗಿ ನೀಟ್ ಪದ್ಧತಿಯನ್ನು ಜಾರಿಗೊಳಿಸಿ, ರಾಜ್ಯದ ಕಾಲೇಜುಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಹುನ್ನಾರ ಅಡಗಿದೆಯೇ ಹೊರತು ಮತ್ತೇನೂ ಅಲ್ಲ ಎಂದು ಆರೋಪಿಸಿದ್ದಾರೆ.
ಕಳೆದ 75 ವರ್ಷಗಳಿಂದ ಕನ್ನಡದ ನೆಲದಲ್ಲಿ, ಕನ್ನಡಿಗರ ದುಡ್ಡಿನಲ್ಲಿ, ಕನ್ನಡಿಗರ ಪರಿಶ್ರಮದಿಂದ ಅರವತ್ತಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾಗಿವೆ. ಆದರೆ ನೀಟ್‍ನಿಂದಾಗಿ ಮೊದಲಿನ ಹಾಗೆ ಕನ್ನಡಿಗರಿಗೆ ಸುಲಭ ಪ್ರವೇಶ ಸಿಗುತ್ತಿಲ್ಲ. ಒಂದೆಡೆ ಸೀಟಿಗೆ ಕೋಟಿಗಟ್ಟಲೆ ಹಣ ಬಾಚುವ ಸ್ಪರ್ಧಾತ್ಮಕ ಲಾಬಿ, ಇನ್ನೊಂದೆಡೆ ಕನ್ನಡಿಗರ ಹಕ್ಕುಗಳನ್ನು ಕಸಿಯುತ್ತಿರುವ ನೀಟ್ ಎಂಬ ಷಡ್ಯಂತ್ರದಿಂದಾಗಿ ಕನ್ನಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೀಟ್‍ನಿಂದಾಗಿ ಮೆಡಿಕಲ್ ಸೀಟು ಸಿಗದೆ ಹಲವಾರು ಪ್ರತಿಭಾವಂತ ಕನ್ನಡದ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮ್ಮ ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿಯೇ ಅವಕಾಶ ಸಿಗದೆ ಸಾಯುವಂತೆ ಮಾಡುತ್ತಿರುವ ಕೆಟ್ಟ ವ್ಯವಸ್ಥೆ ನಮಗೆ ಬೇಕೆ? ಇದೆಂಥ ನ್ಯಾಯ? ಇದನ್ನೆಲ್ಲ ನೋಡಿಕೊಂಡು ನಾವು ಸುಮ್ಮನಿರಬೇಕೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಹಿತಾಸಕ್ತಿ ಕಡೆಗಣಿಸಿದ ಪಕ್ಷಗಳು
ನೀಟ್ ಪರೀಕ್ಷೆಯನ್ನು ಖಂಡಿಸಿ, ತಮಿಳುನಾಡು ಸರಕಾರ ಮೊದಲಿನಿಂದಲೂ ಧ್ವನಿ ಎತ್ತುತ್ತಾ ಬಂದಿದೆ. ಆದರೆ ನಮ್ಮ ರಾಜ್ಯದ ರಾಜಕಾರಣಿಗಳಿಗೆ ಇದರ ಅರಿವೂ ಸಹ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕನ್ನಡಿಗರ ಹಿತಾಸಕ್ತಿ ಕಾಪಾಡಬೇಕಾದ ರಾಜಕೀಯ ಪಕ್ಷಗಳು ಕನ್ನಡಿಗರ ಪಾಲಿಗೆ ಸತ್ತು ಹೋಗಿವೆ. ಇದರ ಪರಿಣಾಮವಾಗಿ ಕನ್ನಡದ ಮಕ್ಕಳು ನಲುಗುವಂತಹ ವಾತಾವರಣ ಸೃಷ್ಟಿಯಾಗಿದೆ.
-ಟಿ.ಎ. ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣ ವೇದಿಕೆ







