ನಟ ಚೇತನ್ ಮೇಲೆ ಮೊಕದ್ದಮೆ: ಇನ್‍ಸ್ಪೆಕ್ಟರ್ ವಿರುದ್ಧ ಡಿಜಿಪಿಗೆ ದೂರು

ಬೆಂಗಳೂರು, ಮಾ.2: ಸಾಮಾಜಿಕ ಹೋರಾಟಗಾರ, ನಟ ಚೇತನ್ ವಿರುದ್ಧ ಮೊಕದ್ದಮೆ ದಾಖಲು ಮಾಡಿರುವ ಇಲ್ಲಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ದೂರು ಸಲ್ಲಿಕೆ ಮಾಡಿದ್ದು, ನ್ಯಾಯಾಧೀಶರ ಕುರಿತು ಟ್ವಿಟ್ ಮಾಡಿದ ನಟ ಚೇತನ್ ಅವರ ಮೇಲೆ ಸ್ವಯಂಪ್ರೇರಿತ ದೂರು ದಾಖಲು ಮಾಡಿರುವ ಇನ್‍ಸ್ಪೆಕ್ಟರ್ ನಡೆಯು ಪಕ್ಷಪಾತದಿಂದ ಕೂಡಿದೆ. ಇದೊಂದು ನಿರ್ಲಕ್ಷ್ಯವಾಗಿದ್ದು, ಕರ್ತವ್ಯ ದ್ರೋಹವಾಗಿದೆ. ಹಾಗಾಗಿ, ಈ ಸಂಬಂಧ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನ್ಯಾಯಾಧೀಶರ ವಿರುದ್ಧದ ನ್ಯಾಯ ನಿಂದನೆಯ ಪ್ರಕರಣವಾಗಿದ್ದರೆ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಈ ಸಂಬಂಧ ದೂರು ದಾಖಲಿಸಲು ಸೂಚಿಸಬೇಕಿತ್ತು. ಅಲ್ಲದೆ, ಟ್ವಿಟ್ ಎನ್ನುವುದು ಸೈಬರ್ ಕ್ರೈಂ ಪೊಲೀಸರಿಗೆ ಒಳಪಟ್ಟಿದೆ. ಆದರೆ, ಅಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಬದಲಾಗಿ, ಏಕಾಏಕಿ ಅವರನ್ನು ಅಪಹರಣ ಮಾದರಿಯಲ್ಲಿ ಬಂಧಿಸಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸರಕಾರಿ ಸಿಬ್ಬಂದಿ, ಅಧಿಕಾರಿಗಳು ಸಾರ್ವಜನಿಕ ತೆರಿಗೆ ಹಣದಿಂದ ವೇತನ ಪಡೆಯುತ್ತಿದ್ದು, ಸಾರ್ವಜನಿಕರ ಸೇವಕರಾಗಬೇಕಾಗಿದೆ. ಆದರೆ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಕ್ಷಪಾತ ಮತ್ತು ಅಧಿಕಾರಕ್ಕೆ ಮಣೆ ಹಾಕುವುದು ಭ್ರಷ್ಟಾಚಾರಕ್ಕೆ ಸಮನಾಗಿದೆ ಎಂದು ಅವರು ತಿಳಿಸಿದ್ದಾರೆ.







