ಕ್ರೈಸ್ತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ದ.ಕ.ಜಿಲ್ಲಾದ್ಯಂತ ಪ್ರತಿಭಟನೆ
ರಸ್ತೆಯುದ್ದಕ್ಕೂ ಮೊಂಬತ್ತಿ ಮೆರವಣಿಗೆ

ಮಂಗಳೂರು, ಮಾ. 2: ರಾಜ್ಯ ಸರಕಾರದ ಉದ್ದೇಶಿತ ಮತಾಂತರ ನಿಷೇಧ ಕಾಯ್ದೆ ಜಾರಿಯ ವಿರುದ್ಧ ಮತ್ತು ರಾಜ್ಯದಲ್ಲಿ ಕ್ರೈಸ್ತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಕೆಥೋಲಿಕ್ ಸಭಾ ಮಂಗಳೂರು ಕೇಂದ್ರೀಯ ಸಮಿತಿ ಹಾಗೂ ಜಿಲ್ಲೆಯ ಎಲ್ಲಾ ಕೆಥೋಲಿಕ್ ಸಭಾ ಕೇಂದ್ರದ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲಾ ಚರ್ಚುಗಳ ಮುಂದೆ ಹಾದುಹೋಗುವ ಪ್ರಮುಖ ರಸ್ತೆ ಹಾಗೂ ಹೆದ್ದಾರಿಗಳ ಪಕ್ಕದಲ್ಲಿ ಬುಧವಾರ ಮೊಂಬತ್ತಿ ಮೆರವಣಿಗೆ ಯೊಂದಿಗೆ ಪ್ರತಿಭಟನೆ ನಡೆಯಿತು.
ರಾಜ್ಯ ಸರಕಾರದ ಪ್ರಸ್ತಾವಿತ ಮತಾಂತರ ನಿಷೇಧ ಕಾಯ್ದೆಯ ವಿರುದ್ಧವೂ ಅಭಿಯಾನ ನಡೆಯಿತು. ಅದಲ್ಲದೆ ಮಂಗಳೂರಿನ ಕೂಳೂರಿನಲ್ಲಿ 40 ವರ್ಷಗಳ ಇತಿಹಾಸವಿರುವ ಕ್ರೈಸ್ತ ಪ್ರಾರ್ಥನಾ ಮಂದಿರದ ಧ್ವಂಸ, ಬೆಂಗಳೂರಿನ ಬೆಟ್ಟವೊಂದರ ಮೇಲಿದ್ದ ಯೇಸುಕ್ರಿಸ್ತರ ಮೂರ್ತಿಯ ಧ್ವಂಸ ಇತ್ಯಾದಿ ವಿರುದ್ಧ ಸಾವಿರಾರು ಕ್ರೈಸ್ತರು ಭಿತ್ತಿಪತ್ರ ಪ್ರದರ್ಶಿಸಿ, ಮೊಂಬತ್ತಿ ಉರಿಸಿ ವೌನ ಪ್ರತಿಭಟನೆ ನಡೆಸಿದರು. ಅದಲ್ಲದೆ ಪ್ರತಿಯೊಬ್ಬರೂ ಪರಸ್ಪರ ಕೈ ಹಿಡಿದು ಮಾನವ ಸರಪಳಿ ಮಾಡಿ ಒಗ್ಗಟ್ಟು ಪ್ರದರ್ಶಿಸಿದರು.ಕ್ರೈಸ್ತ ಧರ್ಮಗುರುಗಳ ಸಹಿತ ಧರ್ಮ ಭಗಿನಿಯರು ಕೂಡ ಮೊಂಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕೆಥೋಲಿಕ್ ಸಭೆಯ ಕೇಂದ್ರೀಯ ಸಮಿತಿಯ ಅಧ್ಯಕ್ಷ ಸ್ಟ್ಯಾನ್ಲಿ ಲೋಬೋ ಮತ್ತು ಮಂಗಳೂರು ಧರ್ಮ ಪ್ರಾಂತದ ಪಿಆರ್‌ಒ ರಾಯ್ ಕ್ಯಾಸ್ಟಲಿನೋ ಮಾರ್ಗದರ್ಶನದಲ್ಲಿ ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಲವಾರು ಕಡೆಗಳಲ್ಲಿ ಸಂಜೆ 6ಕ್ಕೆ ಆರಂಭಗೊಂಡ ಪ್ರತಿಭಟನೆಯು 7ರವರೆಗೆ ಮುಂದುವರಿಯಿತು.