ಉಡುಪಿ ಜಿಲ್ಲೆಯ ಏಳು ಮಂದಿ ಕೋವಿಡ್ಗೆ ಪಾಸಿಟಿವ್

ಉಡುಪಿ, ಮಾ. 2: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಇಂದು ಏಳು ಮಂದಿಯಲ್ಲಿ ಕಾಣಿಸಿಕೊಂಡಿದೆ. ಬುಧವಾರ ಏಳು ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 80ರಲ್ಲಿದೆ.
ಇಂದು ಪಾಸಿಟಿವ್ ಬಂದ ಏಳು ಮಂದಿಯಲ್ಲಿ ಒಬ್ಬ ಪುರುಷ ಹಾಗೂ ಆರು ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ ಉಡುಪಿಯ ನಾಲ್ವರು, ಕುಂದಾಪುರ ತಾಲೂಕಿನ ಇಬ್ಬರು ಹಾಗೂ ಹೊರಜಿಲ್ಲೆಯ ಒಬ್ಬರು ಸೇರಿದ್ದಾರೆ. ಏಳು ಮಂದಿಯಲ್ಲಿ ನಾಲ್ವರು ಕೋವಿಡ್ ಆಸ್ಪತ್ರೆಗೆ ಸೇರಿಸಿದರೆ ಉಳಿದ ಮೂವರು ಅವರವರ ಮನೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಸದ್ಯ ಜಿಲ್ಲೆಯಲ್ಲಿ 14 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಇಬ್ಬರು ವೆಂಟಿಲೇಟ್ ಹಾಗೂ ನಾಲ್ವರು ಐಸಿಯುನಲ್ಲಿದ್ದಾರೆ.
ಬುಧವಾರ ಏಳು ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18412ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1368 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,401ಕ್ಕೇರಿದೆ. ಇಂದು ಸಹ ಜಿ್ಲೆಯಲ್ಲಿ ಕೋವಿಡ್ಗೆ ಯಾರೂ ಬಲಿಯಾಗಿಲ್ಲ.
4534 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 4534 ಮಂದಿ ಕೋವಿಡ್ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 358 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 386 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 139 ಮಂದಿ ಮೊದಲ ಡೋಸ್ ಹಾಗೂ 4009 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷ ದೊಳಗಿನ 59 ಮಂದಿ ಮೊದಲ ಡೋಸ್ ಹಾಗೂ 2581 ಮಂದಿ ಎರಡನೇ ಡೋಸ್ನ್ನು ಇಂದು ಪಡೆದುಕೊಂಡಿದ್ದಾರೆ