ಉಕ್ರೇನ್ನ ಸುಮಿಯಲ್ಲಿ ಆಹಾರ, ನೀರಿನ ಕೊರತೆಯ ನಡುವೆ ಭಾರತಕ್ಕೆ ವಾಪಸಾಗಲು ಕಾಯುತ್ತಿರುವ 600 ವಿದ್ಯಾರ್ಥಿಗಳು
ನಾಗ್ಪುರ (ಮಹಾರಾಷ್ಟ್ರ),ಮಾ.2: ಉಕ್ರೇನ್ ನ ಸುಮಿ ನಗರದಲ್ಲಿಯ ವಿವಿಯೊಂದರಲ್ಲಿ ಸಿಕ್ಕಿಕೊಂಡಿರುವ 600ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ತಮ್ಮನ್ನು ಶೀಘ್ರ ತೆರವುಗೊಳಿಸಲಾಗುತ್ತದೆ ಎಂಬ ಆಸೆಯಿಂದ ಕಾಯುತ್ತಿದ್ದಾರೆ. ಕಳೆದ ಐದು ದಿನಗಳಿಂದ ರಷ್ಯದ ಪಡೆಗಳಿಂದ ನಿರಂತರ ಗುಂಡು ಹಾರಾಟ,ಶೆಲ್ ಮತ್ತು ಬಾಂಬ್ ದಾಳಿಗಳಿಂದಾಗಿ ಈ ವಿದ್ಯಾರ್ಥಿಗಳು ಸಂಪೂರ್ಣವಾಗಿ ಭಯಭೀತರಾಗಿದ್ದಾರೆ.
ರಷ್ಯದ ಗಡಿಗೆ ಸಮೀಪದಲ್ಲಿರುವ ಸುಮಿಯಲ್ಲಿನ ಸರಕಾರಿ ವಿವಿಯಿಂದ ಒಬ್ಬನೇ ಒಬ್ಬ ಭಾರತೀಯ ವಿದ್ಯಾರ್ಥಿಯನ್ನು ಈವರೆಗೆ ತೆರವುಗೊಳಿಸಲಾಗಿಲ್ಲ. ತೆರವುಗೊಳಿಸುವ ಭರವಸೆಯನ್ನೂ ಭಾರತೀಯ ರಾಯಭಾರ ಕಚೇರಿಯು ನೀಡಿಲ್ಲ ಎಂದು ನಾಗ್ಪುರದ ವಿರಾಜ್ ವಾಲ್ದೆ ದೂರವಾಣಿ ಮೂಲಕ ಸುದ್ದಿಸಂಸ್ಥೆಗೆ ತಿಳಿಸಿದರು. ಅವರು ಈ ವಿವಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
‘ನಮ್ಮ ಪರೀಕ್ಷೆಗಳು ಮಾ.15ರಿಂದ ಆರಂಭಗೊಳ್ಳಲಿದ್ದವು. ರಷ್ಯಾದ ಆಕ್ರಮಣಕ್ಕೆ ಮೊದಲು ನಮಗೆ ತಾತ್ಕಾಲಿಕ ಸಲಹೆಗಳನ್ನು ನೀಡಲಾಗಿತ್ತು. ಪರೀಕ್ಷೆಯಿರುವವರು ಕಾಯಬಹುದು ಎಂದು ವಿವಿ ನಮಗೆ ತಿಳಿಸಿತ್ತು. ಹೀಗಾಗಿ ಪರೀಕ್ಷೆಗಳ ಆರಂಭಕ್ಕಾಗಿ ನಾವು ಕಾಯುತ್ತಿದ್ದೆವು. ಆದರೆ ಈಗ ವಿದ್ಯಾರ್ಥಿಗಳು ಹೆದರಿದ್ದಾರೆ,ಅವರ ಮಾನಸಿಕ ಸ್ಥಿತಿಯೂ ಹದಗೆಡುತ್ತಿದೆ. ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿದೆ. ಬ್ಯಾಂಕುಗಳು ಮತ್ತು ಎಟಿಎಂಗಳಲ್ಲಿಯೂ ನಗದು ಹಣ ದೊರೆಯುತ್ತಿಲ್ಲ’ ಎಂದು ವಾಲ್ದೆ ತಿಳಿಸಿದರು.
ಉಕ್ರೇನ್ನ ಪಶ್ಚಿಮ ಗಡಿಯನ್ನು ಮಾತ್ರ ಬಳಸುವಂತೆ ಹಾಗೂ ನೆರೆಯ ದೇಶಗಳಾದ ಪೋಲಂಡ್,ಹಂಗೆರಿ,ರೊಮೇನಿಯಾ,ಸ್ಲೊವಾಕಿಯಾ ಮತ್ತು ಮಾಲ್ಡೋವಾಗಳನ್ನು ತಲುಪುವಂತೆ ರಾಯಭಾರ ಕಚೇರಿಯು ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ. ಆದರೆ ಸುಮಿ ನಗರವು ಉಕ್ರೇನ್ನ ಈಶಾನ್ಯ ಭಾಗದಲ್ಲಿರುವುದರಿಂದ ಪ್ರಸಕ್ತ ಸ್ಥಿತಿಯಲ್ಲಿ ಪಶ್ಚಿಮ ಭಾಗಕ್ಕೆ ಪ್ರಯಾಣಿಸುವುದು ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿದೆ. ಉಕ್ರೇನ್ನ ಪಶ್ಚಿಮ ಗಡಿಯು ಸುಮಿಯಿಂದ ಸುಮಾರು 1,500 ಕಿ.ಮೀ.ದೂರವಿದೆ,ಆದರೆ ರಷ್ಯ ಗಡಿಯು ಕೇವಲ 50 ಕಿ.ಮೀ.ಅಂತರದಲ್ಲಿದೆ. ಬಾಂಬ್ ದಾಳಿಗಳಿಂದಾಗಿ ಸುಮಿಯಲ್ಲಿನ ರೈಲ್ವೆ ನಿಲ್ದಾಣವನ್ನೂ ಮುಚ್ಚಲಾಗಿದೆ. ರಷ್ಯ ಮತ್ತು ಉಕ್ರೇನ್ ಪಡೆಗಳು ಭೀಕರ ಹೋರಾಟದಲ್ಲಿ ತೊಡಗಿರುವುದರಿಂದ ರಸ್ತೆ ಮೂಲಕ ಪ್ರಯಾಣಿಸುವುದೆಂದರೆ ಆತ್ಮಹತ್ಯೆ ಮಾಡಿಕೊಂಡಂತೆ’ ಎಂದರು.
‘ನಗರದಲ್ಲಿ ಶೆಲ್ ದಾಳಿಗಳು ನಡೆಯುತ್ತಿರುವುದರಿಂದ ಹೊರಕ್ಕೆ ಹೋಗದಂತೆ ಸೇನಾಧಿಕಾರಿಗಳು ತಿಳಿಸಿದ್ದಾರೆ. ಏನಾದರೂ ದುರದೃಷ್ಟಕರವಾದುದು ನಮಗೆ ಸಂಭವಿಸುವ ಮೊದಲೇ ನಮ್ಮನ್ನು ತೆರವುಗೊಳಿಸುವಂತೆ ಸುಮಿಯಲ್ಲಿ ಸಿಕ್ಕಿಕೊಂಡಿರುವ ಎಲ್ಲ ವಿದ್ಯಾರ್ಥಿಗಳ ಪರವಾಗಿ ನಾನು ಭಾರತ ಸರಕಾರವನ್ನು ಕೋರುತ್ತೇನೆ’ ಎಂದು ಅವರು ಹೇಳಿದರು.







