ಬಿಜೆಪಿ ಮಾಜಿ ಸಂಸದ ಮನೆಯಿಂದ ನಾಲ್ವರ ಅಪಹರಣ: ತೆಲಂಗಾಣ ಪೊಲೀಸರ ಕೈವಾಡವಿದೆಯೆಂದ ದಿಲ್ಲಿ ಪೊಲೀಸ್
ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿತೇ ತೆಲಂಗಾಣ ಪೊಲೀಸ್?

Photo/ twitter
ಹೊಸದಿಲ್ಲಿ: ಬಿಜೆಪಿ ಮಾಜಿ ಸಂಸದನ ಮನೆಯಿಂದ ನಾಲ್ವರನ್ನು ಅಪಹರಿಸಲಾಗಿದೆ ಎಂಬ ಕುತೂಹಲಕಾರಿ ಪ್ರಕರಣವೊಂದು ದಿಲ್ಲಿಯಿಂದ ವರದಿಯಾಗಿದೆ. ಬಿಜೆಪಿ ಮುಖಂಡ, ಮಹಬೂಬ್ ನಗರದ ಮಾಜಿ ಸಂಸದ ಜಿತೇಂದರ್ ರೆಡ್ಡಿ ಅವರ ದಿಲ್ಲಿ ಯ ಸೌತ್ ಅವೆನ್ಯೂ ನಗರದ ಮನೆಯಿಂದ ಸೋಮವಾರ ರಾತ್ರಿ 8:30 ರ ಹೊತ್ತಿಗೆ ನಾಲ್ವರನ್ನು ಆಗಂತುಕರು ಅಪಹರಿಸಿದ್ದಾರೆ ಎಂದು ದಿಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ರೆಡ್ಡಿಯ ಚಾಲಕ ಥಾಪಾ, ಮಾಜಿ ವಿದ್ಯಾರ್ಥಿ ನಾಯಕ ರವಿ ಮುನ್ನುರ್, ಹಾಗೂ ಇತರೆ ಇಬ್ಬರು ಅತಿಥಿಗಳನ್ನು ರೆಡ್ಡಿ ಮನೆಯಿಂದ ಅಪಹರಿಸಲಾಗಿದೆ ಎಂದು ರೆಡ್ಡಿ ಆಪ್ತ ಸಹಾಯಕ ನೀಡಿದ ದೂರಿನನ್ವಯ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಥಾಪಾ, ರವಿ ಹಾಗೂ ಇನ್ನಿಬ್ಬರು ಅತಿಥಿಗಳು ಫೆಬ್ರವರಿ 26 ರಿಂದ ರೆಡ್ಡಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.
ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ದಿಲ್ಲಿ ಪೊಲೀಸರಿಗೆ ಪ್ರಕರಣದಲ್ಲಿ ನಾಟಕೀಯ ತಿರುವು ದೊರೆತಿದೆ ಎಂದು ವರದಿ ಹೇಳಿದೆ. ಸಿನಿಮೀಯ ಶೈಲಿಯಲ್ಲಿ ತೆಲಂಗಾಣದ ಪೊಲೀಸರು ರೆಡ್ಡಿ ಮನೆಯಿಂದ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಈ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ. ಅದಾಗ್ಯೂ, ತೆಲಂಗಾಣ ಪೊಲೀಸ್ ಅಪಹರಣವನ್ನು ನಿರಾಕರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ತೆಲಂಗಾಣದ ಬಾಲನಗರ್ ಡಿಸಿಪಿ ಜಿ. ಸಂದೀಪ್ ಈ ನಾಲ್ವರು ಅವರಾಗಿಯೇ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು, ಯಾವುದೇ ಅಪಹರಣ ನಡೆದಿಲ್ಲ, ದಿಲ್ಲಿ ಗೆ ಹೋಗಿ ಅವರನ್ನು ವಶಕ್ಕೆ ಕೂಡಾ ಪಡೆದಿಲ್ಲ ಎಂದು theprint ಗೆ ತಿಳಿಸಿದ್ದಾರೆ.
ಅದಾಗ್ಯೂ, ದಿಲ್ಲಿ ಪೊಲೀಸ್ ಮೂಲಗಳು ಬೇರೆಯದ್ದೇ ಕತೆಯನ್ನು ಹೇಳುತ್ತದೆ. ರೆಡ್ಡಿ ಆಪ್ತ ಸಹಾಯಕನ ದೂರಿನನ್ವಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ, ತನಿಖೆ ಆರಂಭಿಸಿದಾಗ, ತೆಲಂಗಾಣ ಪೊಲೀಸರು ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ ಎಂಬ ಮಾಹಿತಿ ದೊರೆತಿದೆ. ರಾಜ್ಯಗಳ ಗಡಿ ದಾಟಿ ನಡೆಸುವ ಕಾರ್ಯಾಚರಣೆಗೆ ಬೇಕಾದ ಅಧಿಕೃತ ಸಂವಹನವನ್ನು ತೆಲಂಗಾಣ ಪೊಲೀಸರು ಮಾಡಿಲ್ಲ ಎಂದು ದಿಲ್ಲಿ ಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
ಬಿಜೆಪಿ ಮುಖಂಡ ರೆಡ್ಡಿ ತೆಲಂಗಾಣ ಪೊಲೀಸರ ವಿರುದ್ಧ ಕಿಡಿ ಕಾರಿದ್ದು, ನಮಗೆ ಏನಾಗುತ್ತಿದೆ ಎಂದು ಗೊತ್ತಾಗಲು ದೆಗಲಿ ಪೊಲೀಸರನ್ನೇ ಅವಲಂಬಿಸಬೇಕಾಗಿದೆ. ಓರ್ವ ಮಾಜಿ ಸಂಸದನ ಮನೆಗೆ ನುಗ್ಗಿ ಅವರ ಅತಿಥಿಗಳನ್ನು ಅಪಹರಿಸಿದ ತೆಲಂಗಾಣ ಪೊಲೀಸರದ್ದು ಅತಿರೇಕದ ವರ್ತನೆ ಎಂದು ಆರೋಪಿಸಿದ್ದಾರೆ.
ಆದರೆ, ಅಪಹರಣ ಆರೋಪವನ್ನು ನಿರಾಕರಿಸಿರುವ ತೆಲಂಗಾಣ ಪೊಲೀಸ್, ಫೆ. 25 ರಂದು ಕೊಲೆ ಯತ್ನ ಪ್ರಕರಣಕ್ಕೆ ದಾಖಲಿಸಲಾಗಿತ್ತು. ನೋಟೀಸ್ ಕೂಡ ಕಳುಹಿಸಲಾಗಿತ್ತು. ಅದರಂತೆ, ಬುಧವಾರ ಇವರು ವಿಚಾರಾಣಾಧಿಕಾರಿ ಎದುರು ಹಾಜರಾಗಿದ್ದಾರೆ ಎಂದು ಹೇಳಿದೆ.
ಎರಡು ಕಾರಿನಲ್ಲಿ ಬಂದ ಆಗಂತುಕರ ತಂಡ ತಮ್ಮ ನಿವಾಸದಿಂದ ನಾಲ್ವರನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವ ಸಿಸಿಟಿವಿ ಫೂಟೇಜ್ ಅನ್ನು ರೆಡ್ಡಿ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಾದಾ ವಸ್ತ್ರದಲ್ಲಿರುವ ಆಗಂತುಕರು ರೆಡ್ಡಿ ಚಾಲಕ ಮತ್ತು ಅತಿಥಿಗಳನ್ನು ಕಾರಿನಲ್ಲಿ ಕೂರಿಸುವುದು ಕಂಡು ಬಂದಿದೆ.
CCTV camera footage pic.twitter.com/RIefsI7ecW
— AP Jithender Reddy (@apjithender) March 1, 2022







