ಉಕ್ರೇನ್‍ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವಂತೆ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಒತ್ತಾಯ

ಭಟ್ಕಳ: ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ದಾಳಿಗೊಳಗಾಗಿರುವ ಭಾರತೀಯ ವಿದ್ಯಾರ್ಥಿಗಳನ್ನು ತಕ್ಷಣವೇ ದೇಶಕ್ಕೆ ಮರಳಿ ಕರೆ ತರುವಂತೆ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಪ್ರಧಾನಿ ಮೋದಿಯವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಬುಧವಾರ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ನೇತೃತ್ವದಲ್ಲಿ ಇಲ್ಲಿನ ಮಿನಿವಿಧಾನಸೌಧದ ಎದರು ಸಭೆ ಸೇರಿದ ನೂರಾರು ಯುವಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಮನಕಲುಕುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅವರ ಭವಿಷ್ಯದ ಕುರಿತಂತೆ ಈ ದೃಶ್ಯಾವಳಿಗಳು ಏನ್ನನ್ನು ಹೇಳಬಯಸುತ್ತಿವೆ ಎಂದು ಮನವಿ ಪತ್ರದಲ್ಲಿ ಪ್ರಶ್ನಿಸಲಾಗಿದೆ.
ವಿದ್ಯಾರ್ಥಿಗಳು ರಾಜತಾಂತ್ರಿಕ ಹಂತಗಳ ಮೂಲಕ ಭಾರತಕ್ಕೆ ಮರಳಿ ಕರೆತರಲು ಭಾರತ ಸರ್ಕಾರಕ್ಕೆ ಸಹಾಯಕ್ಕಾಗಿ ಮನವಿ ಮಾಡುತ್ತಿರುವುದು ಮತ್ತು ಬೇಡಿಕೊಳ್ಳುತ್ತಿರುವುದು ಕಂಡುಬರುತ್ತದೆ. ಕರ್ನಾಟಕದ ಹಾವೇರಿ ಜಿಲ್ಲೆಯ ನವೀನ್ ಎಸ್ ಜಿ ಅವರ ಸಾವಿನ ಸುದ್ದಿ ದೇಶಕ್ಕಾದ ದೊಡ್ಡ ನಷ್ಟವಾಗಿದ್ದು ಇದು ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ನವೀನ್‍ರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾ ಗಿದ್ದು ಇದರಲ್ಲಿ ಕೇಂದ್ರ ಸರ್ಕರದ ಸ್ಪಷ್ಟ ವೈಫಲ್ಯ ಎದ್ದು ಕಾಣುತ್ತಿದೆ ಎಂದು ತಿಳಿಸಲಾಗಿದೆ.
ಕೂಡಲೇ ಭಾರತೀಯ ವಿದ್ಯಾರ್ಥಿಗಳನ್ನು ಸಾಧ್ಯವಿರುವ ಯಾವುದೇ ವಿಧಾನದಿಂದಾದರೂ ಮರಳಿ ಭಾರತಕ್ಕೆ ಸುರಕ್ಷಿತವಾಗಿ ಕರೆತರಬೇಕೆಂದು ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಪ್ರಧಾನಿಯವರನ್ನು ಒತ್ತಾಯಿಸಿದೆ.
ಫೆಡರೇಶನ್ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ ಸೇರಿದಂತೆ ಮುಖಂಡರಾದ ಅಂಜುಮ್ ಗಂಗಾವಳಿ, ಮೌಲಾನಾ ವಸೀವುಲ್ಲಾ ಡಿಎಫ್, ಖೈಸರ್ ಮೊಹ್ತಿಶಾಮ್, ಇಸ್ಮಾಯಿಲ್ ಇಮ್ಶಾದ್ ಮುಕ್ತೇಸರ ಮತ್ತಿರರು ಉಪಸ್ಥಿತರಿದ್ದರು.







