ಕೆಪಿಎಸ್ಸಿ ಪರೀಕ್ಷೆ: ಸಂದರ್ಶನ ಅಂಕ ಕಡಿತ ಪ್ರಸ್ತಾಪ ಕೈಬಿಡುವಂತೆ ಕುಮಾರಸ್ವಾಮಿ ಪತ್ರ

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಅಂಕಗಳನ್ನು 50 ರಿಂದ 25 ಕ್ಕೆ ಇಳಿಸಲು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಸಂದರ್ಶನ ಅಂಕ ಕಡಿತ ಪ್ರಸ್ತಾಪ ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಕುಮಾರಸ್ವಾಮಿ ಅವರು ಬರೆದ ಪತ್ರದ ಸಾರಾಂಶ ಹೀಗಿದೆ...
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗ್ರೂಪ್ ಎಂಬಿ ವೃಂದದ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಯಲ್ಲಿ ಪ್ರಸ್ತುತ ಅನುಸರಿಸುತ್ತಿರುವ ಮುಖ್ಯ ಪರೀಕ್ಷೆಯ ಅಂಕಗಳನ್ನು 1250 ರಿಂದ 1750ಕ್ಕೆ ಹಾಗೂ ಸಂದರ್ಶನಕ್ಕೆ ನಿಗದಿಪಡಿಸಿರುವ ಅಂಕಗಳನ್ನು 50 ರಿಂದ 25ಕ್ಕೆ ಇಳಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ನಾವು ಗಮನಿಸಿದ್ದೇವೆ. ಹಾಗೂ ಗ್ರೂಪ್ ಬಿ ವೃಂದದ ನಾನ್‌ಗೆಜೆಟೆಡ್ ಪ್ರೊದೇಷನರ್ ಹುದ್ದೆಗಳಿಗೆ ನಿಗದಿಪಡಿಸಿದ್ದ ಶೇ. 12.5 ರಷ್ಟು ಸಂದರ್ಶನದ ಅಂಕವನ್ನು ತೆಗೆದುಹಾಕಿರುವುದನ್ನು ಸಹ ಗಮನಿಸಿದ್ದೇವೆ. ಈ ವಿಷಯದ ಬಗ್ಗೆ ನಮ್ಮ ಆಲೋಚನೆಯನ್ನು ರಾಜ್ಯದ ಗ್ರಾಮೀಣ ಹಾಗೂ ತಳಸಮುದಾಯದ ಉದ್ಯೋಗಾಂಕ್ಷಿಗಳ ಹಿತದೃಷ್ಟಿಯಿಂದತಮ್ಮ ಗಮನಕ್ಕೆ ತರುತ್ತಿದ್ದೇವೆ.
ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಸಂದರ್ಶನಕ್ಕೆ ನಿಗದಿಪಡಿಸಿರುವ ಅಂಕಗಳು, ಕೇಂದ್ರ ಲೋಕಸೇವಾ ಆಯೋಗ 275 ಹಾಗೂ ಇತರೆ ರಾಜ್ಯಗಳು ಸರಾಸರಿ ಶೇ. 12 ರಿಂದ 17ವರೆಗೆ ನಿಗದಿಪಡಿಸಿರುವ ಅಂಕಗಳಿಗೆ ಹೋಲಿಸಿದಲ್ಲಿ ಪ್ರಸ್ತುತ ನಿಗದಿಪಡಿಸಿರುವ 50 ಅಂಕಗಳು ಅತೀಕಡಿಮೆ ಶೇ. 4ರಷ್ಟು) ಪ್ರಸ್ತುತ ಇದನ್ನು 25 ಅಂಕಗಳಿಗೆ ಇಳಿಸುತ್ತಿರುವುದು ವೈಜ್ಞಾನಿಕವಾಗಿ ಸಮಂಜಸವಾಗಿರುವುದಿಲ್ಲ. ಅಂದರೆ, ಮುಖ್ಯ ಪರೀಕ್ಷೆಯ 1750 ಅಂಕಗಳಿಗೆ 25 ಸಂದರ್ಶನ ಅಂಕಗಳೆಂದರೆ ಕೇವಲ ಶೇ. 4ರಷ್ಟು ಮಾತ್ರವೇ ನಿಗದಿಪಡಿಸಿದಂತಾಗುತ್ತದೆ. ಮತ್ತು ಗ್ರೂಪ್ ಬಿ ನಾನಗೆಜೆಟೆಡ್ ಪ್ರೊವೇಷನರ್ ಹುದ್ದೆಗಳಿಗೆ ಶೇ. 12.5 ರಷ್ಟು ಸಂದರ್ಶನದ ಅಂಕವನ್ನು ತೆಗೆದುಹಾಕಿರುವುದು ಯಾವುದೇ ಬಲವಾದ ವೈಜ್ಞಾನಿಕ ಕಾರಣಗಳಿರುವುದಿಲ್ಲ.
ಕರ್ನಾಟಕ ಆಳಿತ ಸೇವೆಯುರಾಜ್ಯದ ಆಡಳಿತದ ಹೃದಯವಾಗಿದ್ದು, ಇಲ್ಲಿಗೆ ಆಯ್ಕೆಯಾಗಿ ಬರುವವರಿಗೆ ಕೇವಲ ಶೈಕ್ಷಣಿಕ ಆಥವಾ ಅಂಕಗಳ ಜ್ಞಾನವಿದ್ದರೆ ಸಾಲದು. ಶೈಕ್ಷಣಿಕ ಜ್ಞಾನದ ಜೊತೆಗೆ ರಾಜ್ಯದ ವಾಸ್ತವಿಕ ಸ್ಥಿತಿಗತಿ, ಗ್ರಾಮೀಣ ಜನರ ಬದುಕು-ಬವಣೆಗಳು ಜನರ ನಾಡಿಮಿಡಿತದ ಅರಿವಿರಬೇಕಾಗುತ್ತದೆ. ಇದನ್ನು ಪರೀಕ್ಷಿಸಲು ವ್ಯಕ್ತಿತ್ವ ಪರೀಕ್ಷೆಯೇ ಏಕೈಕ ಮಾರ್ಗ, ಶೈಕ್ಷಣಿಕವಾಗಿ ಅಂಕಗಳನ್ನು ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷಾತರಬೇತಿ ಕೇಂದ್ರಗಳ ನಗರ ಪ್ರದೇಶಗಳಾದ ದೆಹಲಿ, ಹೈದರಾಬಾದ್, ಬೆಂಗಳೂರು ಮುಂತಾದ ನಗರಗಳಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದವರೇ ಆಯ್ಕೆಯಾಗುವ ಸಂಭವವಿದ್ದು, ಗ್ರಾಮೀಣ ಹಾಗೂ ಎಲ್ಲಾ ಹಿಂದುಳಿದ ವರ್ಗದ ಪ್ರತಿಭಾವಂತರು ಹಾಗೂ ಅತ್ಯಂತ ವ್ಯಕ್ತಿತ್ವ ಕೌಶಲ್ಯವುಳ್ಳ ಗ್ರಾಮೀಣ ಅಭ್ಯರ್ಥಿಗಳಿಗೆ ಅವಕಾಶ ವಂಚಿತರಾಗುವ ಅಪಾಯವಿದೆ. ಕರ್ನಾಟಲ ಲೋಕ ಸೇವಾ ಆಯೋಗದ ಕೆಲವು ಲೋಪಗಳನ್ನು ಮಾನದಂಡವನ್ನಾಗಿಟ್ಟುಕೊಂಡು ಸರ್ಕಾರವೇ ನೇಮಕ ಮಾಡಿದಆಯೋಗದ ಮೇಲೆ ಅಪನಂಬಿಕೆ ಇರಿಸಿಕೊಳ್ಳುವುದು ಸೂಕ್ತವಾದುದಲ್ಲ. ಇದರಿಂದ ಸಾಂವಿಧಾನಿಕ ಸಂಸ್ಥೆಯೊಂದರ ಮೇಲೆ ಸಾರ್ವಜನಿಕ ವಲಯದಲ್ಲಿ ಅಪನಂಬಿಕೆ ಮೂಡುತ್ತದೆ.
ಸರ್ಕಾರವು ಸಾಮಾಜಿಕ ನ್ಯಾಯ, ಪ್ರಾದೇಶಿಕತೆ, ಶೈಕ್ಷಣಿಕ ಅರ್ಹತೆ ನೋಡಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರನ್ನು, ಸದಸ್ಯರುಗಳನ್ನು ನೇಮಿಸಿದ್ದು, ಇವರೊಂದಿಗೆ ವಿಷಯ ತಜ್ಞರು ಹಾಗೂ ಅಧಿಕಾರಿಗಳು ಸೇರಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ನಡೆಸುತ್ತಾರೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿಳ ಸಾಮರ್ಥ್ಯವನ್ನು ಗ್ರಹಿಸಿಯೇ ಅಂಕಗಳನ್ನು ನೀಡುವುದರಿಂದ ಸಹಜವಾಗಿ ವಾಸ್ತವಿಕ ಪ್ರಪಂಚದ ಅರಿವುಳ್ಳ ಧೈರ್ಯವಂತ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ.
ಗೆಜೆಟೆಡ್ ಪ್ರೊಬೇಷನರ್ ಹಾಗೂ ಗ್ರೂಪ್ ಎ, ಬಿ, ಸಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿರುವ ಅಭ್ಯರ್ಥಿಗಳು ಕಾರ್ಯಕಾರಿ, ಹಿರಿಯ ಅಧಿಕಾರಿ, ಕಿರಿಯ ಅಧಿಕಾರಿ ಮತ್ತು ಜನರ ನಡುವೆ ನೇರ ಸಂಪರ್ಕ ಹೊಂದಿದ್ದು ಉತ್ತಮ ಆಡಳಿತ ನೀಡಲುಅವರ ವ್ಯಕ್ತಿತ್ವ ಪಾತ್ರವು ಪ್ರಮುಖವಾಗಿದೆ. ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ)ಯನ್ನು ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿಯ ಅನುಪಾತದಲ್ಲೇ ಇರುವುದು ಸೂಕ್ತವಾಗಿದ್ದು ಹಾಗೂ ಅಳವಡಿಸಿಕೊಳ್ಳಬೇಕು.
ಆದ್ದರಿಂದ, ಸರ್ಕಾರವು ಕೇಂದ್ರ ಲೋಕಸೇವಾ ಆಯೋಗ ಹಾಗೂ ಇತರೆ ರಾಜ್ಯಗಳಲ್ಲಿರುವ ಮಾದರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿಯಲ್ಲಿ ಸಂದರ್ಶನ ಅಂಕಗಳನ್ನು ನಿಗದಿಪಡಿಸುವಂತೆ, ಪ್ರಸ್ತಾಪಿತ ತಿದ್ದುಪಡಿಯನ್ನು ಕೈಬಿಡುವಂತೆ ಮತ್ತು ಗ್ರೂಪ್ ಬಿ ನಾನ್‌ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಸಂದರ್ಶನವನ್ನು ತೆಗೆದುಹಾಕಿ ದಿನಾಂಕ 21.02.2022ರಂದು ಅಧಿಸೂಚನೆಯಾಗಿರುವುದನ್ನು ಕೈಬಿಡುವಂತೆ ಕೋರುತ್ತೇವೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.







