‘ದಿಕ್ಕು ತಪ್ಪಿಸುತ್ತಿರುವ ರಾಯಭಾರಿ ಕಚೇರಿ’: ಟಿವಿ ವಾಹಿನಿಯೊಂದಿಗೆ ಉಕ್ರೇನ್ ನಲ್ಲಿರುವ ರಾಜ್ಯದ ವಿದ್ಯಾರ್ಥಿಯ ಅಳಲು
''ದಿನಕ್ಕೆ ಒಮ್ಮೆ ಮಾತ್ರ ಊಟ'' ► ''ಎಷ್ಟು ದಿನ ಬದುಕುತ್ತೇವೋ ಗೊತ್ತಿಲ್ಲ''

ಬೆಂಗಳೂರು, ಮಾ.2: ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಭಯಾನಕ ಸ್ಥಿತಿಯನ್ನು ಕರ್ನಾಟಕ ಮೂಲದ ವಿದ್ಯಾರ್ಥಿ ಪ್ರಸಾದ್ ಎಂಬವರು ಕನ್ನಡ ಸುದ್ದಿ ವಾಹಿನಿ ‘ಪಬ್ಲಿಕ್ ಟಿವಿ’ ಜೊತೆಗೆ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ರಾಯಭಾರ ಕಚೇರಿಯ ನಿರ್ಲಕ್ಷ, ಉಕ್ರೇನ್ ಜನರಿಂದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆಗಳು, ರಶ್ಯ ಸೇನೆಯಿಂದ ವಿದ್ಯಾರ್ಥಿನಿಯರ ಅಪಹರಣವೂ ಸೇರಿದಂತೆ ಹಲವು ಹೃದಯವಿದ್ರಾವಕ ಘಟನೆಗಳನ್ನು ಸುದ್ದಿ ವಾಹಿನಿಯ ಜೊತೆಗೆ ಹಂಚಿಕೊಂಡಿದ್ದಾರೆ. ‘ನಮ್ಮನ್ನು ಕರೆಸಿಕೊಳ್ಳಲು ಕ್ರಮ ತೆಗೆದುಕೊಳ್ಳಿ’ ಎಂದು ಆರ್ತ ಧ್ವನಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆತ ಟಿವಿ ವಾಹಿನಿಯೊಂದಿಗೆ ಆಡಿದ ಮಾತುಗಳ ಸಾರಾಂಶ ಇಲ್ಲಿದೆ...
ಪಬ್ಲಿಕ್ ಬಂಕರ್ ಗಳಲ್ಲಿ ಭಾರತೀಯರಿಗೆ ನಿಷೇಧ: ಖಾರ್ಕಿವ್ ನಗರದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪಬ್ಲಿಕ್ ಬಂಕರ್ಗಳಿಗೆ ಹೋಗಲು ಆಗುತ್ತಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ವಿರುದ್ಧದ ರಶ್ಯ ದಾಳಿಯನ್ನು ಖಂಡಿಸುವ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿರುವುದು ಇಲ್ಲಿನ ನಾಗರಿಕರನ್ನು ಕಂಗೆಡಿಸಿದೆ. ಇದರಿಂದ ಅವರು ಭಾರತೀಯರ ಮೇಲೆ ತುಂಬ ಸಿಟ್ಟಾಗಿದ್ದಾರೆ.
ಅಲ್ಲದೆ, ಈಗಾಗಲೇ ಬಂಕರ್ ನಲ್ಲಿ ಆಶ್ರಯ ಪಡೆದಿರುವ ಭಾರತೀಯರನ್ನು ಹೊಡೆದು ಹೊರಗೆ ಹಾಕಿ, ತಮ್ಮ ತಮ್ಮ ಅಪಾರ್ಟ್ಮೆಂಟ್ಗಳಿಗೆ ತೆರಳುವಂತೆ ತಿಳಿಸಲಾಗುತ್ತಿದೆ. ಹಾಸ್ಟೆಲ್ ಹಾಗೂ ವಿಶ್ವವಿದ್ಯಾನಿಲಯದ ಬಂಕರ್ನಲ್ಲಿರುವ ವಿದ್ಯಾರ್ಥಿಗಳು ಮಾತ್ರ ಸುರಕ್ಷಿತವಾಗಿದ್ದಾರೆ. ಉಳಿದವರು ಪಬ್ಲಿಕ್ ಬಂಕರ್ಗಳಿಗೆ ಹೋಗಲು ಸಾಧ್ಯವಾಗದೆ ಅಪಾರ್ಟ್ ಮೆಂಟ್ ಗಳಲ್ಲಿದ್ದಾರೆ.
ಊಟ-ನೀರಿಗಾಗಿ ಪರದಾಟ: ನಮಗೆ ಊಟ ಇಲ್ಲ ಇನ್ನೆರಡು ಮೂರು ದಿನಗಳಲ್ಲಿ ಮುಗಿಯಬಹುದು. ಕುಡಿಯುವ ನೀರು ಮುಗಿದು ಹೋಗಿದೆ. ನಲ್ಲಿ ನೀರನ್ನು ಬಿಸಿ ಮಾಡಿ ಸೇವಿಸುತ್ತಿದ್ದೇವೆ. ಹೊರಗಡೆ ಹೋಗಲು ಅವಕಾಶವಿಲ್ಲ. ಸ್ಥಳೀಯರು ಎಲ್ಲಿ ನಮ್ಮನ್ನು ಹಿಡಿದು ಹೊಡೆಯುತ್ತಾರೋ ಅನ್ನೋ ಭಯ. ಗಡಿಭಾಗದಲ್ಲಿ ಹುಡುಗರನ್ನು ಹೊಡೆಯುತ್ತಿರುವ ವೀಡಿಯೊಗಳು ನಮ್ಮ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಬರುತ್ತಿವೆ. ಭಾರತೀಯ ರಾಯಭಾರಿ ಕಚೇರಿಯಂತೂ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಲು ಸಾಧ್ಯವೇ ಇಲ್ಲ ಎನ್ನುತ್ತಿದೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ.
ನಮ್ಮನ್ನು ಬ್ಲಾಕ್ಮೇಲ್ ಮಾಡಿ ಇರಿಸಿಕೊಂಡಿದ್ದರು: ಫೆ.15ರಂದು ಯಾರಿಗೆ ಇಲ್ಲಿ ಅವಶ್ಯಕತೆ ಇಲ್ಲವೋ ಅವರು ಭಾರತಕ್ಕೆ ಬನ್ನಿ ಎಂದು ತಿಳಿಸಲಾಯಿತು. ನಮ್ಮ ವಿಶ್ವವಿದ್ಯಾಲಯವು ಆನ್ಲೈನ್ ತರಗತಿಗಳನ್ನು ಮಾಡುವುದಿಲ್ಲ, ಆಫ್ಲೈನ್ ತರಗತಿಗಳನ್ನು ಮಾಡುತ್ತೇವೆ ಎಂದು ತಿಳಿಸಿದೆ. ಇಲ್ಲಿ ಮೂರನೇ ಹಾಗೂ ಆರನೇ ವರ್ಷ ಬೋರ್ಡ್ ಪರೀಕ್ಷೆಗಳು ಇರುತ್ತವೆ. ಅದನ್ನು ಬರೆಯದೆ ಹೋದರೆ ನಿಮಗೆ ಒಂದು ವರ್ಷ ರಿಪೀಟ್ ಮಾಡುತ್ತೇವೆ ಎಂದು ಬ್ಲಾಕ್ಮೇಲ್ ಮಾಡಿ ಇಲ್ಲಿ ಇರಿಸಿಕೊಂಡಿದ್ದರು.
ರಾಯಭಾರಿ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ಅವರು ವಿಶ್ವವಿದ್ಯಾಲಯದ ಮಾತು ಕೇಳಿ, ಏನು ಆಗಲ್ಲ ಎಂದು ಹೇಳಿದರು. ಅದರಂತೆ ನಾವು ಸುಮ್ಮನೆ ಕೂತೆವು. ನಾಲ್ಕು ಐದು, ದಿನಗಳ ಮುಂಚೆ ನಮಗೆ ಹೇಳಿದರು, ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಎಲ್ಲರೂ ಹೋಗಿ ಎಂದು. ಆಗ ಎಲ್ಲ ನಾಗರಿಕ ವಿಮಾನಗಳ ಟಿಕೆಟ್ ಗಳು ಬುಕ್ ಆಗಿದ್ದವು.
ದುಬಾರಿ ಟಿಕೆಟ್ ದರ ಪಡೆದ ಏರ್ ಇಂಡಿಯಾ: ನಾಗರಿಕ ವಿಮಾನಯಾನ ಸಂಸ್ಥೆಗಳು ತಮ್ಮ ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಿದರೆ, ಭಾರತ ಸರಕಾರದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಆರರಿಂದ ಏಳುಪಟ್ಟು ಹೆಚ್ಚು ಟಿಕೆಟ್ ದರ ಕೇಳಿತು. ಆದರೂ ನಾವು ಫೆ.25, 26ರಂದು ಟಿಕೆಟ್ ಬುಕ್ ಮಾಡಿಕೊಂಡೆವು. ಆದರೆ, ವಿಮಾನಯಾನ ರದ್ದಾಯಿತು. ಅದರಿಂದ ಅನಿವಾರ್ಯವಾಗಿ ಇಲ್ಲೇ ಉಳಿದು ಕೊಳ್ಳಬೇಕಾಯಿತು.
ರಾಯಭಾರಿ ಕಚೇರಿ ಮಾತು ಕೇಳೋದೆ ತಪ್ಪಾಗಿದೆ: ಮತ್ತೊಂದು ಗಡಿಯಿಂದ ಹೋಗುತ್ತಿರುವವರು ಸುರಕ್ಷಿತವಾಗಿ ವಾಹನಗಳ ಮೂಲಕ ಹೊರಗೆ ಹೋಗುತ್ತಿದ್ದಾರೆ. ರಾಯಭಾರ ಕಚೇರಿ ತಿಳಿಸಿರುವ ಗಡಿಯಿಂದ ಹೊರಗೆ ಹೋಗಲು ಕಾಯುತ್ತಿರುವ ವಿದ್ಯಾರ್ಥಿಗಳು ಹೊಡೆಸಿಕೊಳ್ಳುತ್ತಿದ್ದಾರೆ. ಇವರ ಮಾತು ಕೇಳುವುದೆ ತಪ್ಪಾಗಿದೆ. ಹಂಗೇರಿಯ ಚಾಪ್‌ರೆನಿ, ರೊಮೇನಿಯಾದ ಸುಸೇವಾ, ಪೋಲ್ಯಾಂಡ್‌ನ ವರ್ಕಲೋ ಗಡಿಯಿದೆ. ಪೋಲ್ಯಾಂಡ್ ಮೂಲಕ ಸುರಕ್ಷಿತವಾಗಿ ತೆರಳಬಹುದಾದ ಗಡಿ ಗೋದ್ವಿರಝ್. ಆದರೆ ಅದನ್ನು ಈ ಮುಂಚೆ ನಮಗೆ ತಿಳಿಸಿರಲಿಲ್ಲ. ಈಗ ಹೇಳುತ್ತಿದ್ದಾರೆ.
ಕರೆಗಳನ್ನು ಸ್ವೀಕರಿಸದ ರಾಯಭಾರ ಕಚೇರಿ
ಸುದ್ದಿ ವಾಹಿನಿಗಳಲ್ಲಿ ನಾವು ಅಲ್ಲಿದ್ದೇವೆ, ಇಲ್ಲಿದ್ದೇವೆ ಎಂದು ರಾಯಭಾರಿ ಕಚೇರಿಯವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಕಳೆದ 18 ಗಂಟೆಯಿಂದ ರಾಯಭಾರಿ ಕಚೇರಿಯ ಯಾರೊಬ್ಬರೂ ಗಡಿಯಲ್ಲಿ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಮೂರು ದಿನಗಳಿಂದ ಉಕ್ರೇನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಕರೆಗಳನ್ನು ಡಿಸ್ಕನೆಕ್ಟ್ ಮಾಡುತ್ತಿದ್ದಾರೆ, ಹೋಲ್ಡ್ ಅಥವಾ ಹ್ಯಾಂಗ್ಗೆ ಹಾಕುತ್ತಿದ್ದಾರೆ. ಸ್ವಿಚ್ ಆಫ್ ಮಾಡಿಕೊಂಡು ಕೂರುತ್ತಿದ್ದಾರೆ.
ದಿನಕ್ಕೆ ಒಮ್ಮೆ ಮಾತ್ರ ಊಟ
ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದೇವೆ. ಆಲೂಗಡ್ಡೆ ಬೇಯಿಸಿ ಉಪ್ಪು ಬೆರೆಸಿ ತಿನ್ನುತ್ತಿದ್ದೇವೆ. ನೆರೆ ಹೊರೆಯವರು ಬ್ರೆಡ್ ತಂದು ಕೊಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಗ್ಯಾಸ್ ಪೈಪ್ ಲೈನ್ ಧ್ವಂಸವಾಗಿದೆ. ಇಲ್ಲಿ ಮೈನಸ್ 15-16 ಡಿಗ್ರಿ ತಾಪಮಾನ ಇದೆ. ನಲ್ಲಿ ನೀರನ್ನು ಬಿಸಿ ಮಾಡಲು ನೆರೆಹೊರೆ ಯವರನ್ನು ಅವಲಂಬಿಸಿದ್ದೇವೆ. ಹೆಣ್ಣು ಮಕ್ಕಳ ಪರಿಸ್ಥಿತಿಯಂತೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಸಾದ್ ತಿಳಿಸಿದರು.
ಎಷ್ಟು ದಿನ ಬದುಕುತ್ತೇವೋ ಗೊತ್ತಿಲ್ಲ: ಸರಕಾರಕ್ಕೆ ಹೇಳಲು ಏನೂ ಉಳಿದಿಲ್ಲ. ನಮ್ಮನ್ನು ಇಲ್ಲಿಂದ ತೆರುವುಗೊಳಿಸಿ. ಭಾರತ ಸರಕಾರವಾಗಲಿ, ಖಾಸಗಿಯವರಾಗಲಿ ಯಾರಾದರೂ ನೆರವು ನೀಡಿ. ನಾವು ಎಷ್ಟು ದಿನ ಇಲ್ಲಿ ಬದುಕುತ್ತೇವೋ ಎಂದು ಹೇಳಲು ಸಾಧ್ಯವಿಲ್ಲ ಎಂದು ಪ್ರಸಾದ್ ಹೇಳಿದರು.
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ತಾವು ಏನೇನೋ ಮಾಡಿದ್ದೇವೆ ಎಂದು ಭಾರತದಲ್ಲಿ ಬಿಂಬಿಸಿ ಕೊಳ್ಳುತ್ತಿದ್ದಾರೆ. ಆದರೆ, ಉಕ್ರೇನ್‌ನ ಗಡಿ ಭಾಗಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಅವರು ವಾಹನಗಳನ್ನು ಕಳುಹಿಸಿಲ್ಲ. ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳು ವಾಹನಗಳನ್ನು ಮಾಡಿಕೊಂಡು ಹೋಗಿದ್ದಾರೆ.
ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಕಿರುಕುಳ: ಉಕ್ರೇನ್‌ನ ಗಡಿ ರಕ್ಷಣಾ ಸಿಬ್ಬಂದಿಗಳು ಭಾರತೀಯ ವಿದ್ಯಾರ್ಥಿಗಳಿಗೆ ಚೆಕ್‌ಪೋಸ್ಟ್‌ಗಳಲ್ಲಿ ಕಿರುಕುಳ ನೀಡುತ್ತಿದ್ದಾರೆ. ಹೊಡೆಯುತ್ತಿದ್ದಾರೆ. ಮೈ ಕೊರೆಯುವ ಚಳಿಯಲ್ಲಿ 18-19 ಗಂಟೆಗಳ ಕಾಲ ಅನ್ನ, ನೀರು ಇಲ್ಲದೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳ ಕಿವಿಯ ಹತ್ತಿರದಲ್ಲೇ ಬಂದೂಕು ಇಟ್ಟು ಶೂಟ್ ಮಾಡುತ್ತಿದ್ದಾರೆ.
ರಾಷ್ಟ್ರಧ್ವಜ ಹಿಡಿದುಕೊಂಡು ಹೋದವರನ್ನು ಗಡಿ ಭಾಗದಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಡಲಾಗುತ್ತಿದೆ ಅನ್ನೋದು ತಪ್ಪು. ಉಕ್ರೇನ್‌ನಿಂದ ಹೊರಗೆ ಹೋಗಲು ಎರಡು ಗಡಿ ಪ್ರದೇಶಗಳಿವೆ. ರಾಯಭಾರ ಕಚೇರಿ ತಿಳಿಸಿರುವ ಗಡಿಯಿಂದ ಹೊರಗೆ ಹೋದರೆ ಅಲ್ಲಿ ಸೈನಿಕರು ಭಾರತೀಯರನ್ನು ಹೊಡೆಯುತ್ತಿದ್ದಾರೆ.
ಬೇರೆ ದೇಶದ ವಿದ್ಯಾರ್ಥಿಗಳ ಸ್ಥಳಾಂತರ:
ಬೇರೆ ದೇಶದ ವಿದ್ಯಾರ್ಥಿಗಳನ್ನು ಒಂದೂವರೆ ತಿಂಗಳ ಮುಂಚೆಯೇ ಆಯಾ ದೇಶದ ರಾಯಭಾರ ಕಚೇರಿಗಳು ಸ್ಥಳಾಂತರ ಮಾಡಿದೆ. ನಮ್ಮ ರಾಯಭಾರ ಕಚೇರಿಯಂತೆ ಅವರು ಆಲಸ್ಯದಿಂದ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿನ ಪರಿಸ್ಥಿತಿ ಬಗ್ಗೆ ಮೊದಲೆ ಮಾಹಿತಿ ನೀಡಿದ್ದರೆ ನಾವೇ ಟಿಕೆಟ್ ಬುಕ್ ಮಾಡಿಕೊಂಡು ಹೋಗಿ, ಇವತ್ತು ಭಾರತದಲ್ಲಿ ಇರುತ್ತಿದ್ದೆವು.
ಪಾಕಿಸ್ತಾನದ ರಾಯಭಾರಿ ಸಿಬ್ಬಂದಿಯಿಂದ ಸ್ಥಳಾಂತರ:
ಪಾಕಿಸ್ತಾನದ ರಾಯಭಾರ ಕಚೇರಿಯ ಸಿಬ್ಬಂದಿ ಸ್ವತಃ ಬಂದು ಅವರ ದೇಶದ ವಿದ್ಯಾರ್ಥಿಗಳನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಬಂದು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದಾರೆ. ನಮ್ಮ ರಾಯಭಾರ ಕಚೇರಿಯವರು ಕೂತು ಹುಡುಗರ ಜೊತೆ ಜಗಳವಾಡುತ್ತಿದ್ದಾರೆ. ಏನಾದರೂ ಮಾತನಾಡಿದರೆ ಹೊರಗೆ ಹೋಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.
ನಮ್ಮ ಜೊತೆ ವಿದ್ಯಾಭ್ಯಾಸ ಮಾಡುತ್ತಿರುವ ಪಾಕಿಸ್ತಾನದ ವಿದ್ಯಾರ್ಥಿಗಳು ಈ ಸಂಬಂಧ ಗ್ರೂಪ್‌ಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಸ್ವತಃ ಅವರ ದೇಶದ ರಾಯಭಾರಯೇ ಬಂದಿದ್ದರು. ಆದರೆ, ನಮ್ಮ ರಾಯಭಾರ ಕಚೇರಿಯವರು ಭಾರತೀಯ ಹುಡುಗರ ಬಳಿ ಹೋಗುತ್ತಿಲ್ಲ. ಗಡಿ ಭಾಗಕ್ಕೆ ಹೋಗಿರುವ ಹುಡುಗರಿಗೆ ನಿಮ್ಮ ವ್ಯವಸ್ಥೆಯನ್ನು ನೀವೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಗಡಿ ದಾಟಿ ಬಂದ ನಂತರ ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಘಟನೆಯಾದ 20 ಗಂಟೆಗಳ ಬಳಿಕ ಭಾರತ ಸರಕಾರ ಪ್ರತಿನಿಧಿಗಳನ್ನು ಕಳುಹಿಸುತ್ತಿದೆ. ನಾನು ಇರುವ ಊರಿನಲ್ಲೆ ಸುಮಾರು 5-6 ಸಾವಿರ ಮಂದಿ ಭಾರತೀಯರು ಇದ್ದಾರೆ. ಉಕ್ರೇನ್ ಗಡಿಯಿಂದ ಹೊರಗೆ ಹೋಗಲು ಸಾಧ್ಯವಾಗದಿದ್ದರೆ ರಶ್ಯ ಜೊತೆ ಮಾತನಾಡಿ ನಮ್ಮನ್ನು ಹೊರಗೆ ಕರೆಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಈಗಾಗಲೆ ನಮ್ಮ ಅರ್ಧ ನಗರ ರಶ್ಯ ಅವರ ವಶವಾಗಿದೆ.
ಯಾರ ನೆರವು ಸಿಗುತ್ತಿಲ್ಲ: ಭಾರತೀಯರಿಗೆ ಉಕ್ರೇನ್ ದೇಶದ ನೆರವಿಲ್ಲ, ರಶ್ಯದಿಂದ ಯಾವ ನೆರವು ಸಿಗುತ್ತಿಲ್ಲ. ನಮ್ಮ ದೇಶದ ಬಗ್ಗೆಯಂತೂ ಕೇಳಲೇಬೇಡಿ. ಸ್ಥಳೀಯರು ಕೆಲವರು ನೆರವು ನೀಡುತ್ತಿದ್ದಾರೆ. ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದೇವೆ. ಬಂಕರ್‌ಗಳಲ್ಲಿರುವ ಕೆಲವು ಹೆಣ್ಣು ಮಕ್ಕಳಿಗೆ ಅಸ್ತಮಾ, ಮಧುಮೇಹ ಇದೆ. ಅವರಿಗೆ ಔಷಧಿಗಳು ಸಿಗುತ್ತಿಲ್ಲ. ನಮ್ಮ ದೇಶದವರು ಏನಾದರೂ ಮಾಡುತ್ತಾರೇನೋ ಎಂದು ನೊಡುತ್ತಿದ್ದೇವೆ.
ಚುನಾವಣೆಗಾಗಿ ನಮ್ಮ ತ್ಯಾಗವೇ?: ಭಾರತದಲ್ಲಿ ಚುನಾವಣೆಗಳು ನಡೆಯುತ್ತಿವೆ ಆದುದರಿಂದ, ರಾಯಭಾರ ಕಚೇರಿಗಳು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿವೆ ಎಂದು ಕೇಳುತ್ತಿದ್ದೇವೆ. ಚುನಾವಣೆಗಾಗಿ ನಮ್ಮ ತ್ಯಾಗ ಆದರೆ ಏನು ಪರಿಸ್ಥಿತಿ.
ಇಂತಹವರು ಇಲ್ಲದೆ ಇದ್ದಿದ್ದರೆ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತೋ? ಗೊತ್ತಿಲ್ಲ. ರಾಯಭಾರ ಕಚೇರಿಯವರು ನಮ್ಮ ಕರೆ ಸ್ವೀಕರಿಸಿದರೆ ನಾವು ಈ ಎಲ್ಲ ವಿಚಾರ ಅವರಿಗೆ ತಿಳಿಸಬಹುದು. ರಾಜಧಾನಿ ಕೀವ್‌ನಲ್ಲಿ ಬಂಕರ್‌ಗಳಲ್ಲಿ ವಿದ್ಯಾರ್ಥಿಗಳು ಇದ್ದರೂ ಅವರನ್ನು ಉಕ್ರೇನ್ ಯೋಧರು ಹೊರಗೆ ಹಾಕುತ್ತಿದ್ದಾರೆ. ಪರಿಸ್ಥಿತಿ ಹೇಗಿದೆ ಎಂದರೆ, ಭಾರತೀಯರು ಪಬ್ಲಿಕ್ ಬಂಕರ್ಗಳಿಗೆ ಹೋಗಲು ಹೆದರುತ್ತಿದ್ದಾರೆ. ಭಾರತೀಯರನ್ನು ನೋಡಿದರೆ ಸಾಕು ಉಕ್ರೇನ್ ಯೋಧರು ಆಕ್ರೋಶಗೊಳ್ಳುತ್ತಿದ್ದಾರೆ.
ವಿದ್ಯಾರ್ಥಿನಿಯರನ್ನು ಅಪಹರಿಸಿದ ರಶ್ಯ ಯೋಧರು
ಉಕ್ರೇನ್ ರಾಜಧಾನಿಯಿಂದ ಗಡಿ ಪ್ರದೇಶಕ್ಕೆ ಸ್ಥಳಾಂತರ ಮಾಡಲು ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಯಭಾರ ಕಚೇರಿ ಹೇಳಿತ್ತು. ಅದನ್ನು ನಂಬಿ ನಾಲ್ವರು ಹುಡುಗರು ಹಾಗೂ ನಾಲ್ವರು ಹುಡುಗಿಯರು ರೈಲು ನಿಲ್ದಾಣಕ್ಕೆ ತೆರಳಿದ್ದರು. ಮಾರ್ಗ ಮಧ್ಯೆ ರಶ್ಯ ಯೋಧರು ಈ ಹುಡುಗರನ್ನು ಗನ್ ಪಾಯಿಂಟ್‌ನಲ್ಲಿಟ್ಟು ಹುಡುಗಿಯರನ್ನು ಎತ್ತಿಕೊಂಡು ಹೋಗಿದ್ದಾರೆ. ಈ ವಿಚಾರವನ್ನು ಆ ಹುಡುಗರ ಪೈಕಿ ಒಬ್ಬ ಇಲ್ಲಿ ನಮ್ಮ ಗ್ರೂಪಿನಲ್ಲಿರುವ ಹುಡುಗಿಗೆ ತಿಳಿಸಿದ್ದಾನೆ. ಐದು ನಿಮಿಷದ ಬಳಿಕ ಆ ಹುಡುಗರ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಅವರು ಎಲ್ಲಿದ್ದಾರೆ, ಏನಾಗಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಇಲ್ಲಿನ ನೆರೆಹೊರೆಯವರು ನಮ್ಮ ಬಗ್ಗೆ ಕಾಳಜಿ ಹೊಂದಿದ್ದಾರೆ. ಅಪಾರ್ಟ್‌ಮೆಂಟ್ ಬಿಟ್ಟು ಹೊರಗೆ ಹೋಗಬೇಡಿ ಎನ್ನುತ್ತಿದ್ದಾರೆ. ಏನಾದರೂ ಬೇಕಿದ್ದರೆ ನಮ್ಮನ್ನು ಕೇಳಿ ಎನ್ನುತ್ತಿದ್ದಾರೆ. ಇಂತಹವರು ಇಲ್ಲದೆ ಇದ್ದಿದ್ದರೆ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತೋ? ಗೊತ್ತಿಲ್ಲ. ರಾಯಭಾರ ಕಚೇರಿಯವರು ನಮ್ಮ ಕರೆ ಸ್ವೀಕರಿಸಿದರೆ ನಾವು ಈ ಎಲ್ಲ ವಿಚಾರ ಅವರಿಗೆ ತಿಳಿಸಬಹುದು. ರಾಜಧಾನಿ ಕೀವ್‌ನಲ್ಲಿ ಬಂಕರ್‌ಗಳಲ್ಲಿ ವಿದ್ಯಾರ್ಥಿಗಳು ಇದ್ದರೂ ಅವರನ್ನು ಉಕ್ರೇನ್ ಯೋಧರು ಹೊರಗೆ ಹಾಕುತ್ತಿದ್ದಾರೆ. ಪರಿಸ್ಥಿತಿ ಹೇಗಿದೆ ಎಂದರೆ, ಭಾರತೀಯರು ಪಬ್ಲಿಕ್ ಬಂಕರ್ಗಳಿಗೆ ಹೋಗಲು ಹೆದರುತ್ತಿದ್ದಾರೆ. ಭಾರತೀಯರನ್ನು ನೋಡಿದರೆ ಸಾಕು ಉಕ್ರೇನ್ ಯೋಧರು ಆಕ್ರೋಶಗೊಳ್ಳುತ್ತಿದ್ದಾರೆ.
ರಾಯಭಾರಿ ಕಚೇರಿಯಿಂದ ಮಾಹಿತಿ ಬಂದಿರಲಿಲ್ಲ
ಭಾರತವು ಯಾವುದಾದರೂ ಸ್ಪಷ್ಟ ನಿಲುವು ತಾಳಿ ಒಂದು ರಾಷ್ಟ್ರದ ಮೂಲಕ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಬೇಕಿತ್ತು. ರಾಯಭಾರ ಕಚೇರಿಯಂತೂ ದಿಕ್ಕು ತಪ್ಪಿಸುತ್ತಿದೆ. ಭಾರತದಲ್ಲಿ ತಿಳಿಸುತ್ತಿರುವಂತೆ ಒಂದು ತಿಂಗಳ ಮುಂಚೆಯೇ ನಮಗೆ ರಾಯಭಾರ ಕಚೇರಿಯಿಂದ ಮಾಹಿತಿ ಬಂದಿರಲಿಲ್ಲ. ಜನವರಿ 25ರಂದು ಒಂದು ಅರ್ಜಿ ನಮೂನೆ ಬಂತು. ಅದರಲ್ಲಿ, ರಶ್ಯ ಗಡಿಯಲ್ಲಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪರಿಸ್ಥಿತಿ ಸದ್ಯಕ್ಕೆ ಸುರಕ್ಷಿತವಾಗಿದೆ. ಒಂದು ವೇಳೆ ಏನಾದರೂ ಸಮಸ್ಯೆಗಳು ಆದಲ್ಲಿ ನಾವು ನಿಮ್ಮನ್ನು ರಕ್ಷಿಸುತ್ತೇವೆ ಎಂದು ತಿಳಿಸಲಾಗಿತ್ತು ಅಷ್ಟೇ.







