ಪಾಕ್: ಬೆನಾಡ್-ಖಾದಿರ್ ಟ್ರೋಫಿ ಅನಾವರಣ

ರಾವಲ್ಪಿಂಡಿ, ಮಾ. 2: ಆಸ್ಟ್ರೇಲಿಯವು 24 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನ್ನು ಆಡಲು ಸಿದ್ಧವಾಗಿದೆ. ಇದರ ಸಂಭ್ರಮಾಚರಣೆಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯ (ಸಿಎ) ಬುಧವಾರ ಬೆನಾಡ್-ಖಾದಿರ್ ಟ್ರೋಫಿಯನ್ನು ಅನಾವರಣಗೊಳಿಸಿವೆ. ಇದು ಖಾಯಂ ಟ್ರೋಫಿಯಾಗಿದ್ದು, ಪಾಕಿಸ್ತಾನ ಮತ್ತು ಆಸ್ಟ್ರೇಲಿಯ ಪುರುಷರ ಕ್ರಿಕೆಟ್ ತಂಡಗಳ ನಡುವಿನ ಪ್ರತಿ ಟೆಸ್ಟ್ ಸರಣಿಯ ಕೊನೆಯಲ್ಲಿ ವಿಜೇತ ತಂಡಕ್ಕೆ ನೀಡಲಾಗುವುದು.
ಪ್ರಥಮ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಬುಧವಾರ ರಾವ ಲ್ಪಿಂಡಿಯ ಪಿಂಡಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಮ್ ಮತ್ತು ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ಬೆನಾಡ್-ಖಾದಿರ್ ಟ್ರೋಫಿಯನ್ನು ಅನಾವರಣಗೊಳಿಸಿದರು. ಲಾಹೋರ್‌ನಲ್ಲಿರುವ ಪಾಕಿಸ್ತಾನ ಕ್ರಿಕೆಟ್‌ನ ಪ್ರಧಾನ ಕಚೇರಿಯಲ್ಲಿ ಈ ಟ್ರೋಫಿಯನ್ನು ವಿಜೇತ ತಂಡಕ್ಕೆ ನೀಡಲಾಗುವುದು. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಪ್ರಥಮ ಟೆಸ್ಟ್ ಪಂದ್ಯವು ಶುಕ್ರವಾರ ಪಿಂಡಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಆರಂಭಗೊಳ್ಳುವುದು.
ಸ್ಪಿನ್ ಬೌಲರ್ ಬೆನಾಡ್ 1959ರಲ್ಲಿ ಪಾಕಿಸ್ತಾನಕ್ಕೆ ಪೂರ್ಣ ಪ್ರವಾಸ ಕೈಗೊಂಡ ಆಸ್ಟ್ರೇಲಿಯ ತಂಡದ ನಾಯಕನಾಗಿದ್ದರು. ಆ ಸರಣಿಯನ್ನು ಆಸ್ಟ್ರೇಲಿಯ 2-0 ಅಂತರದಿಂದ ಗೆದ್ದಿತು. ಸ್ಪಿನ್ನರ್ ಖಾದಿರ್ ಆಸ್ಟ್ರೇಲಿಯ ವಿರುದ್ಧ 11 ಟೆಸ್ಟ್‌ಗಳನ್ನು ಆಡಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಆಸ್ಟ್ರೇಲಿಯ ವಿರುದ್ಧ 1982 ಮತ್ತು 1988ರಲ್ಲಿ ಎರಡು ಸರಣಿಗಳಲ್ಲಿ ಆಡಿ 33 ವಿಕೆಟ್‌ಗಳನ್ನು ಉರುಳಿಸಿದ್ದಾರೆ.