ಕೇಂದ್ರ ಸರಕಾರಕ್ಕೆ ಉಕ್ರೇನ್ ಗೆ ಕಾಲಿಡುವ ಧೈರ್ಯವೇ ಇಲ್ಲ: ದೆಹಲಿಗೆ ತಲುಪಿದ ಕನ್ನಡಿಗ ವಿದ್ಯಾರ್ಥಿಯ ಆಕ್ರೋಶ
''ನಾವು ವಾಪಸ್ ಆದ ಮೇಲೆ ಇಲ್ಲಿ ಸಚಿವರು 'ಶೋ- ಆಫ್' ಮಾಡ್ತಿದ್ದಾರೆ''

ಬೆಂಗಳೂರು/ಹೊಸದಿಲ್ಲಿ: ಉಕ್ರೇನ್ ನಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಅನೀಶ್ ಜಯಂತ್ ಎಂಬವರು ಹಂಗೇರಿ ಗಡಿ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ.
ಸರ್ಕಾರದ ಸಹಾಯವಿಲ್ಲದೇ ಸ್ನೇಹಿತರ ಜೊತೆ ಗಡಿ ತಲುಪಿದ್ದ ಅನೀಶ್ ಇದೀಗ ದೆಹಲಿಗೆ ಆಗಮಿಸಿದ್ದು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ವಿದ್ಯಾರ್ಥಿ ಅನೀಶ್ , ಉಕ್ರೇನ್ ನಿಂದ ವಾಪಸ್ ಆಗಿರುವುದು ಖುಷಿ ತಂದಿದೆ ಆದರೆ, ಅಲ್ಲಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ವೆಸ್ಟರ್ನ್ ಸೈಡ್ ಅಲ್ಲಿ ಇರುವುದರಿಂದ ಬಂದಿದ್ದೇವೆ, ಈಸ್ಟರ್ನ್ ಭಾಗದಲ್ಲಿರುವ ವಿದ್ಯಾರ್ಥಿಗಳು ನರಕ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೇಂದ್ರ ಸರಕಾರ ಅಲ್ಲಿ ಏನೂ ಮಾಡ್ತಾ ಇಲ್ಲ, ಉಕ್ರೇನ್ ಗೆ ಕಾಲು ಕೂಡಾ ಇಡ್ತಾ ಇಲ್ಲ. ಗಡಿ ತಲುಪಿರುವ ವಿದ್ಯಾರ್ಥಿಗಳನ್ನು ಮಾತ್ರ ದೇಶಕ್ಕೆ ವಾಪಸ್ ಕರ್ಕೊಂಡು ಬರ್ತಾ ಇದ್ದಾರೆ. ಗಡಿಗೆ ಬರದೇ ಇರುವ ವಿದ್ಯಾರ್ಥಿಗಳನ್ನು ಅಲ್ಲೇ ಸಾಯಿರಿ ಎಂದು ಅವರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉಕ್ರೇನ್: ಖಾರ್ಕಿವ್ ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉಜಿರೆಯ ಹೀನಾ ಫಾತಿಮಾ
ಗಡಿಗೆ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಕೇಂದ್ರ ಸರಕಾರ ವಿಮಾನದ ವ್ಯವಸ್ಥೆ ಮಾಡ್ತಾ ಇದೆ ಹೊರತು ಗಡಿಯಲ್ಲಿ ಭಾರತದ ಯಾವುದೇ ಭಾರತದ ರಾಯಭಾರಿ ಕಚೇರಿಯ ಪ್ರತಿನಿಧಿಗಳು ಇಲ್ಲ. ಗಡಿಯಲ್ಲಿ ಬಸ್ ಮೇಲೆ ಇರುವ ನಮ್ಮ ರಾಷ್ಟ್ರ ಧ್ವಜವನ್ನು ನೋಡಿ ಬಸ್ ಗಳನ್ನು ಬಿಡ್ತಾ ಇದ್ದಾರೆ. ಕೇಂದ್ರ ಸರ್ಕಾರ ಬರುತ್ತೆ ಅಂತ ನಂಬಿ ಕೂತಿದ್ರೆ ನಮ್ಮ ಜೀವ ಹೋಗ್ತಿತ್ತು. ನಾವು ಅಲ್ಲಿ ವಿದ್ಯಾರ್ಥಿ ಒಕ್ಕೂಟಗಳ ಸಹಕಾರದಿಂದ ಬಸ್ ವ್ಯವಸ್ಥೆ ಮಾಡಿ ನಾವೇ ಖರ್ಚು ಮಾಡಿ ಗಡಿಗೆ ಬಂದೆವು. ಈಸ್ಟರ್ನ್ ಸೈಡ್ ನಲ್ಲಿರುವ ವಿದ್ಯಾರ್ಥಿಗಳಿಗೆ ರೈಲು ಮೂಲಕ ಗಡಿಗೆ 'ನೀವೇ ಬನ್ನಿ' ಎಂದು ರಾಯಭಾರಿ ಕಚೇರಿಯಿಂದ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖುದ್ದು ಭಾರತೀಯ ರಾಯಭಾರಿ ಉಕ್ರೇನ್ ಬಿಟ್ಟು ಹೋಗಿದೆ. ಭಾರತ ಸರ್ಕಾರ ಇಲ್ಲಿರುವ ಅಧಿಕಾರವನ್ನು ಅಲ್ಲಿ ತೋರಿಸ್ತಾ ಇಲ್ಲ. ಆದರೆ, ನಾವು ಭಾರತಕ್ಕೆ ಬಂದ ಬಳಿಕ ನಾವೇ ಮಾಡಿದ್ದೇವೆ ಅಂತ ಕೇಂದ್ರ ಸಚಿವರು ಬಂದು 'ಶೋ- ಆಫ್' ಮಾಡ್ತಿದ್ದಾರೆ ಎಂದು ವಿದ್ಯಾರ್ಥಿ ಅನೀಶ್ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ವಿರುದ್ಧ ಆಕ್ರೋಶ: ವಿದ್ಯಾರ್ಥಿ ಅನೀಶ್ ಸರಕಾರದ ವಿರೋಧಿ ಹೇಳಿಕೆ ನೀಡಿದ್ದಾನೆ ಎಂದು ಆರೋಪಿಸಿ ಹಲವಾರು ಮಂದಿ ಬಲಪಂಥೀಯರು ಮತ್ತು ಸರಕಾರದ ಪರವಾಗಿದ್ದವರು 'ವಿದ್ಯಾರ್ಥಿಗಳಿಗೆ ಉಕ್ರೇನ್ ಗೆ ತೆರಳುವ ಅಗತ್ಯ ಏನಿತ್ತು? ಭಾರತದಲ್ಲೇ ಶಿಕ್ಷಣ ಪಡೆಯಬಹುದಿತ್ತು. ಇದೀಗ ಅವರು ಭಾರತಕ್ಕೆ ವಾಪಸ್ ಆದ ಮೇಲೆ ಕೇಂದ್ರ ಸರಕರಾಕ್ಕೆ ಕೆಟ್ಟ ಹರೆಸರು ತರಲು ದೇಶದ್ರೋಹಿಗಳಂತೆ ಮಾತನಾಡುತ್ತಿದ್ದಾರೆ. ನಮ್ಮ ಸರಕಾರ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇದೆ' ಎಂದು ಹಲವರು ಈ ವಿಡಿಯೋಗೆ ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.







