ಹಾಸನ: ಉಕ್ರೇನ್ ನಲ್ಲಿರುವ ಮಗನಿಗೆ ರಕ್ಷಣೆ ನೀಡುವಂತೆ ಡಿಸಿಗೆ ಮನವಿ ಸಲ್ಲಿಸಿ ಬಂದು ಕುಸಿದು ಬಿದ್ದು ಅಸ್ವಸ್ಥರಾದ ತಾಯಿ

ಹಾಸನ : ಮಾ, 3. ಉಕ್ರೇನ್ ನಲ್ಲಿ ಸಿಲುಕಿರುವ ಮಗನಿಗೆ ರಕ್ಷಣೆ, ಅಹಾರ ನೀಡಲು ಡಿಸಿ ಬಳಿ ಮನವಿ ಮಾಡಿದ ನಂತರ ತಾಯಿ ಕುಸಿದು ಬಿದ್ದು ಅಸ್ವಸ್ಥರಾದ ಘಟನೆ ಹಾಸನ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನಡೆದಿದೆ.
ಪೋಷಕರು ಮನವಿ ಮಾಡಿ ಜಿಲ್ಲಾಧಿಕಾರಿ ಕಛೇರಿಯಿಂದ ಆವರಣಕ್ಕೆ ಬಂದಾಗ ಗಗನ್ ತಾಯಿ ಸುಜಾತ ಅವರು ದುಃಖ ತಡೆಯಲಾರದೆ ಕೆಳಗೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದು, ಬಳಿಕ ಅವರನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದಿದ್ದಾರೆ.
ತಂದೆ ಕೇಶವಮೂರ್ತಿ ಮತ್ತು ತಾಯಿ ಸುಜಾತ ಅವರು ಜಿಲ್ಲಾಧಿಕಾರಿಗಳ ಬಳಿ ಮಾತನಾಡುತ್ತಾ, ಮಗ ತುಂಬಾ ಕಷ್ಟದಲ್ಲಿ ಸಿಲುಕಿದ್ದಾನೆ. ಹೊಟ್ಟೆಗೆ ಊಟವಿಲ್ಲದೆ ನೀರು ಕುಡಿದುಕೊಂಡೆ 40 ಕಿ.ಮಿ. ದೂರ ಯುದ್ಧಭೂಮಿಯಲ್ಲಿ ನಡೆದಿದ್ದಾನೆ. ಭಯದಲ್ಲಿದ್ದು, ನಾನು ಸಾಯುವ ಸ್ಥಿತಿಯಲ್ಲಿದ್ದೇನೆ ಎಂದು ನೋವು ತೋಡಿಕೊಳ್ಳುತ್ತಿದ್ದಾನೆ. ಭಾರತೀಯರಿಗೆ ಉಕ್ರೇನ್ನಿಂದ ಹೊರಬರಲು ಅವಕಾಶ ನೀಡುತ್ತಿಲ್ಲ. ಉಕ್ರೇನಿಯನ್ನರು ಕೇವಲಗಡಿ ದಾಟಲು ಮಾತ್ರ ಅವಕಾಶ ಮಾಡುತ್ತಿದ್ದಾರೆ. ಈ ಕ್ರಮದಿಂದ ನಮ್ಮ ಮಕ್ಕಳು ಅಲ್ಲೇ ಉಳಿಯುವ ಪರಿಸ್ಥಿತಿ ಎದುರಾಗಿದೆ ಎಂದು ವಿವರಿಸಿದರು.
ಈ ಘಟನೆಯನ್ನು ಒಪ್ಪಿಕೊಂಡ ಹಾಸನ ಜಿಲ್ಲಾಧಿಕಾರಿ ಅವರು, ಭಾರತೀಯ ವಿದ್ಯಾರ್ಥಿಗಳಿಗೆ ಹೊರಬರಲು ಅವಕಾಶ ಕೊಡುತ್ತಿಲ್ಲ ಎಂದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇನೆ ಎಂದರು.
ಭಾರತೀಯರಿಗೆ ಕಾಲಲ್ಲಿ ಒದ್ದು ಹಲ್ಲೆ ಮಾಡುತ್ತಿದ್ದಾರಂತೆ. ಭಾರತೀಯರ ಪರವಾಗಿ ಸರ್ಕಾರ ನಿಲ್ಲಬೇಕು ಎಂದು ಗಗನ್ ಪೋಷಕರ ದುಃಖದಲ್ಲಿ ಅಳಲು ತೋಡಿಕೊಂಡರು.







