ದ.ಕ.ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶ

ಮಂಗಳೂರು, ಮಾ.3:ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಾ.28 ಮತ್ತು 29ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರದ ತಯಾರಿಗಾಗಿ ದ.ಕ.ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶವು ಬುಧವಾರ ನಗರದಲ್ಲಿ ನಡೆಯಿತು.
ಎಐಟಿಯುಸಿ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ ದೇಶ ಸೇವೆ ಮಾಡುವುದಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಹೆಜ್ಜೆ ಹೆಜ್ಜೆಗೂ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿದೆಯೇ ವಿನಃ ದೇಶದ ಕಾರ್ಮಿಕ ವರ್ಗ ಸಹಿತ ಜನಸಾಮಾನ್ಯರ ಬದುಕನ್ನು ಉತ್ತಮ ಪಡಿಸಲು ಗಮನ ಹರಿಸುತ್ತಿಲ್ಲ. ಬದಲಾಗಿ ಸಂಪತ್ತನ್ನು ಹರಾಜು ಮಾಡುತ್ತಾ ದೇಶವನ್ನು ದಿವಾಳಿಯ ಅಂಚಿಗೆ ತಳ್ಳಿದೆ ಎಂದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಕಾರ್ಮಿಕ ವರ್ಗದ ಪ್ರಮುಖ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಲು ಹೊರಟಿರುವ ಕೇಂದ್ರ ಸರಕಾರವು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ ಬಂಡವಾಳಶಾಹಿಗಳ ಲಾಭವನ್ನು ಹೆಚ್ಚಿಸಲು ಹೊರಟಿದೆ ಎಂದು ಆಪಾದಿಸಿದರು.
ಬ್ಯಾಂಕ್ ನೌಕರರ ಸಂಘಟನೆಯ ರಾಜ್ಯ ನಾಯಕ ವಿನ್ಸೆಂಟ್ ಡಿಸೋಜ, ಫಣೀಂದ್ರ, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯ ನಾಯಕರಾದ ರಾಘವ, ಸುರೇಶ್ ಹೆಗ್ಡೆ ಮಾತನಾಡಿದರು.
ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಬಿ.ಶೇಖರ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ, ವಿಮಾ ನೌಕರರ ಸಂಘದ ಮುಖಂಡರಾದ ಬಿ.ಎನ್. ದೇವಾಡಿಗ ಉಪಸ್ಥಿತರಿದ್ದರು.
ಎಐಟಿಯುಸಿ ನಾಯಕರಾದ ಸುರೇಶ್ ಕುಮಾರ್ ಸ್ವಾಗತಿಸಿದರು. ಸಿಐಟಿಯು ನಾಯಕಿ ಜಯಂತ ನಾಯಕ್ ವಂದಿಸಿದರು