ಮಾರಕ ಅಸ್ತ್ರದೊಂದಿಗೆ ಮಸೀದಿಗೆ ಪ್ರವೇಶ ಪ್ರಕರಣ ಸೂಕ್ತ ತನಿಖೆಯಾಗಲಿ: ಮಿತ್ತಬೈಲ್ ಆಡಳಿತ ಮಂಡಳಿ
ಬಂಟ್ವಾಳ, ಮಾ.3: ವ್ಯಕ್ತಿಯೊಬ್ಬ ಮಾರಕ ಅಸ್ತ್ರ ಹಿಡಿದು ಮಸೀದಿಯೊಳಗೆ ಪ್ರವೇಶ ಮಾಡಿರುವ ಪ್ರಕರಣದ ಹಿಂದಿರುವ ಎಲ್ಲಾ ಶಕ್ತಿಗಳನ್ನು ಹಾಗೂ ಷಡ್ಯಂತ್ರವನ್ನು ಸೂಕ್ತ ತನಿಖೆಯ ಮೂಲಕ ಪೊಲೀಸ್ ಇಲಾಖೆ ಕೊಡಲೇ ಬಯಲಿಗೆಳೆಯಬೇಕು ಎಂದು ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಆಗ್ರಹಿಸಿದೆ.
ಕೆಎ.19.ಇಐ5352 ನೋಂದಣಿಯ ದ್ವಿಚಕ್ರ ವಾಹನದಲ್ಲಿ ಬಂದ ಕಲ್ಲಡ್ಕ ನಿವಾಸಿ ಬಾಬು ಎಂಬಾತ ಮಾ. 1ರಂದು ರಾತ್ರಿ 10.05ಕ್ಕೆ ಕೈಕಂಬ ಮಿತ್ತಬೈಲ್ ಮುಹಿಯ್ಯುದ್ದೀನ್ ಜುಮಾ ಮಸೀದಿಯೊಳಗೆ ಪ್ರವೇಶಿಸಿದ್ದು ಆತನ ಬಳಿ ಮಾರಕ ಅಸ್ತ್ರ ಪತ್ತೆಯಾಗಿದೆ.
ಮಸೀದಿಯ ಒಳಗೆ ಪ್ರವೇಶಗೈದ ಆತ ಅಲ್ಲಿಂದ ಹೊರಗೆ ಬಂದು ದರ್ಗಾದ ಬಳಿ ರಾತ್ರಿ ಪಾಳಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಕೆಲಸಗಾರರಲ್ಲಿ ಮಸೀದಿಯ ಖತೀಬರ ಬಗ್ಗೆ ವಿಚಾರಿಸಿದ್ದಾನೆ. ನಂತರ ಅಲ್ಲಿಂದ ತೆರಳಿ ಮತ್ತೆ ದರ್ಗಾದ ಬಳಿಗೆ ಆತ ಬಂದಾಗ ಸಂಶಯಗೊಂಡ ಪೈಂಟಿಂಗ್ ಕೆಲಸಗಾರರು ಆತನನ್ನು ವಿಚಾರಿಸಿದ್ದಾರೆ. ಆತನ ಮಾತಿನಲ್ಲಿ ಶಂಸಯಗೊಂಡ ಕೆಲಸಗಾರರು ಆತನನ್ನು ಹಿಡಿದಿಟ್ಟು ಜಮಾಅತ್ ಕಮಿಟಿಯವರಿಗೆ ತಿಳಿಸಿದ್ದಾರೆ.
ನಾವು ಸ್ಥಳಕ್ಕೆ ತೆರಳಿ ಆತನ ವಾಹನ ಪರಿಶೀಲನೆ ನಡೆಸಿದಾಗ ಅದರಲ್ಲಿ ಮಾರಕ ಅಸ್ತ್ರ ಪತ್ತೆಯಾಗಿದ್ದು ಬಳಿಕ ಆತನನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದೇವೆ. ಪೊಲೀಸರು ಆತನ ವಿರುದ್ಧ ಐಪಿಸಿ ಕಾಲಂ 1860 (ಯು/ಎಸ್-448, 506 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ತನಿಖೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮಸೀದಿಯ ಸಿಸಿ ಕೆಮಾರ ಫೋಟೇಜ್ ಅನ್ನು ಪೊಲೀಸರಿಗೆ ನೀಡಿದ್ದೇವೆ. ಮಾರಕ ಅಸ್ತçದೊಂದಿಗೆ ಮಸೀದಿಗೆ ಬಂದು ಧರ್ಮ ಗುರುವಿನ ಬಗ್ಗೆ ವಿಚಾರಿಸಿದ್ದು ಮತ್ತು ಆತನ ನಡೆಯ ಬಗ್ಗೆ ಹಲವು ರೀತಿಯ ಸಂಶಯ ಹುಟ್ಟು ಹಾಕಿದೆ. ಬಂಧಿತ ವ್ಯಕ್ತಿಯನ್ನು ಪೊಲೀಸ್ ಇಲಾಖೆ ತೀವ್ರ ವಿಚಾರಣೆಗೆ ಒಳಪಡಿಸಬೇಕು. ಘಟನೆಯ ಹಿಂದೆ ಬೇರೆ ವ್ಯಕ್ತಿಗಳು ಕೂಡಾ ಇರುವ ಅನುಮಾನ ಇದ್ದು ತನಿಖೆ ನಡೆಸಿ ಅವರನ್ನು ಕೂಡಾ ಬಂಧಿಸಬೇಕು ಎಂದು ನಾವು ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ.
ಬಂಟ್ವಾಳ ತಾಲೂಕು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ನಿರಂತರವಾದ ಕೋಮು ಘರ್ಷಣೆಯಿಂದ ಜನತೆ ತತ್ತರಿಸಿ ಹೋಗಿದ್ದು ಕೆಲವು ಸಮಯದಿಂದ ತಾಲೂಕು ಶಾಂತಿಯಿಂದ ಇದೆ. ಧರ್ಮ ಗುರುಗಳ ಮೇಲೆ ದಾಳಿ ನಡೆಸುವ ಮೂಲಕ ಮತ್ತೆ ತಾಲೂಕಿನಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಕಿಡಿಗೇಡಿಗಳು ನಡೆಸಲು ಯತ್ನಿಸುತ್ತಿರುವ ಅನುಮಾನ ಕೂಡಾ ವ್ಯಕ್ತವಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ನಡೆಸಬೇಕು. ಹಾಗೂ ಜನರು ಯಾವುದೇ ಪ್ರಚೋಧನೆಗೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ಮಸೀದಿಯ ಅಧ್ಯಕ್ಷ ಮುಹಮ್ಮದ್ ಸಾಗರ್ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.