ಎಬಿವಿಪಿ ವಿರೋಧ ವ್ಯಕ್ತಪಡಿಸಿದ ಬಳಿಕ ಪ್ರಾಂಶುಪಾಲರೇ ಹೇಳಿಕೆ ಬದಲಿಸಿದರು: ವಿದ್ಯಾರ್ಥಿನಿ ಹಿಬಾ ಶೇಖ್
ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ

ಮಂಗಳೂರು, ಮಾ.3: ನಗರದ ರಥಬೀದಿಯಲ್ಲಿರುವ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯುತ್ತಿದ್ದ ಆರೇಳು ವಿದ್ಯಾರ್ಥಿನಿಯರನ್ನು ಬಲವಂತವಾಗಿ ಪರೀಕ್ಷಾ ಕೊಠಡಿಯಿಂದ ಹೊರಗೆ ಹಾಕಿದ ಘಟನೆ ಗುರುವಾರ ನಡೆದಿದೆ.
ಈ ಬಗ್ಗೆ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಹಿಬಾ ಶೇಖ್ ಎಂಬಾಕೆಯು ವೀಡಿಯೋ ಹೇಳಿಕೆಯೊಂದನ್ನು ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರೀ ವೈರಲ್ ಆಗಿದೆ.
ಈ ದಿನ ನಮಗೆ ಪರೀಕ್ಷೆ ಇತ್ತು. ಅದರಂತೆ ನಾವು ಪರೀಕ್ಷೆ ಬರೆಯುತ್ತಿದ್ದಾಗ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಾಯಿ ಸಂದೇಶ್ ಎಂಬಾತ ನಮ್ಮನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಹಾಕುವಂತೆ ಪ್ರಾಂಶುಪಾಲರ ಬಳಿ ಒತ್ತಾಯಿಸತೊಡಗಿದ. ಆರಂಭದಲ್ಲಿ ಪ್ರಾಂಶುಪಾಲರು ಆತನ ಮಾತನ್ನು ಗಣನೆಗೆ ತೆಗೆದುಕೊಳ್ಳದಿದ್ದಾಗ ಆತ ಪ್ರಾಂಶುಪಾಲರ ವಿರುದ್ಧ ಮಾತನಾಡತೊಡಗಿದ. ಅಲ್ಲದೆ ಕಾಲೇಜಿನ ಇತರ ವಿದ್ಯಾರ್ಥಿಗಳ ಜೊತೆ ಸೇರಿ ಗದ್ದಲ ಎಬ್ಬಿಸಿದ. ಅಲ್ಲದೆ ಸಾಯಿ ಸಂದೇಶ್ ಮತ್ತಷ್ಟು ಒತ್ತಡ ಹಾಕಿದಾಗ ಪ್ರಾಂಶುಪಾಲರು ನಮ್ಮನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಹಾಕಲು ಅನುಮತಿಸಿದರು. ಈ ಮಧ್ಯೆ ಪೊಲೀಸರನ್ನು ಪರೀಕ್ಷಾ ಕೊಠಡಿಗೆ ಕರೆಯಿಸಿಕೊಂಡ ಸಾಯಿ ಸಂದೇಶ್ ಹಿಜಾಬ್ ಧರಿಸಿ ಪರೀಕ್ಷೆ ಬರೆಯುತ್ತಿದ್ದ ನಮ್ಮನ್ನು ಹೊರಗೆ ಕಳುಹಿಸಿದ ಎಂದು ಆರೋಪಿಸಿದ್ದಾರೆ.
ನಮ್ಮಂದಿಗೆ ಪರೀಕ್ಷೆ ಬರೆಯುತ್ತಿದ್ದ ಶಾಹಿನಾರಿಗೂ ಪೊಲೀಸರು ಬೆದರಿಕೆ ಹಾಕಿದರು. ನನ್ನದೊಂದು ಸಹಿ ನಿನ್ನ ವಿದ್ಯಾರ್ಥಿ ಜೀವನವನ್ನೇ ಕೊನೆಗಾಣಿಸಬಹುದು. ಮತ್ತೆ ನೀನು ಮತ್ಯಾವ ಕಾಲೇಜಿಗೂ ಹೋಗಲು ಸಾಧ್ಯವಿಲ್ಲ ಎಂದು ಪೊಲೀಸರು ಬೆದರಿಸಿದರು ಎಂದು ಹಿಬಾ ಶೇಖ್ ಆರೋಪಿಸಿದ್ದಾರೆ.
ಹಿಜಾಬ್ ಪ್ರಕರಣದ ಬಳಿಕ ಈ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುತ್ತಿದ್ದರೂ ಕೂಡ ತರಗತಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಗುರುವಾರ ಆರಂಭಗೊಂಡ ಪರೀಕ್ಷೆ ಬರೆಯಲು ಕಾಲೇಜಿನ ಪ್ರಾಂಶುಪಾಲರು ಮೊದಲು ಅವಕಾಶ ನೀಡಿದ್ದರೂ ಬಳಿಕ ಒತ್ತಡಕ್ಕೆ ಮಣಿದರು ಎಂದು ನೊಂದ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ನಮಗೆ ಪ್ರಾಂಶುಪಾಲರು ಸಹಿ ಹಾಕಿ ಅನುಮತಿ ಪತ್ರವನ್ನು ನೀಡಿದ್ದರು. ಆದರೆ ಸಾಯಿ ಸಂದೇಶ್‌ನ ಒತ್ತಡದ ಬಳಿಕ ಪ್ರಾಂಶುಪಾಲರು ಮೊದಲು ಕೊಟ್ಟಿದ್ದ ಅನುಮತಿ ಪತ್ರಕ್ಕೆ ಸಂಬಂಧಿಸಿದಂತೆ ನಾನು ಯಾರಿಗೂ ಯಾವುದೇ ಅನುಮತಿ ಪತ್ರ ಕೊಟ್ಟಿಲ್ಲ ಎಂದು ಸುಳ್ಳು ಹೇಳಿ ನಮ್ಮನ್ನು ಆಶ್ಚರ್ಯಚಕಿತರಾಗುವಂತೆ ಮಾಡಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಪರೀಕ್ಷಾ ಕೊಠಡಿಯಲ್ಲಿ ಎಬಿವಿಪಿ ನಾಯಕ ಸಾಯಿ ಸಂದೇಶ ನಮಗೆ ಧಮ್ಕಿ ಹಾಕಿದ್ದಾನೆ ಮತ್ತು ಸ್ಥಳಕ್ಕೆ ಬಂದಿದ್ದ ಪೊಲೀಸರು ಕೂಡ ನಮಗೆ ಬೆದರಿಕೆ ಹಾಕಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಈ ಮಧ್ಯೆ ಎರಡ್ಮೂರು ದಿನದ ಹಿಂದೆ ಕಾಲೇಜಿನ ಸಿಬ್ಬಂದಿಯೊಬ್ಬ ನಮ್ಮನ್ನು ಅಮಾನವೀಯವಾಗಿ ಕಾಣುತ್ತಿದ್ದ. ಕಾಲೇಜು ಸಹಪಾಠಿಗಳ ಜೊತೆ ಬೆರೆಯಬಾರದು. ಇಲ್ಲಿ ಊಟ ಮಾಡಬಾರದು. ನೀರು ಕುಡಿಯಬಾರದು ಎಂದು ಆ ಸಿಬ್ಬಂದಿ ಒತ್ತಡ ಹಾಕುತ್ತಿದ್ದ ಎಂದು ಹಿಬಾ ಶೇಖ್ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು 'ವಾರ್ತಾಭಾರತಿ'ಯು ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕೂಡ ಪ್ರಾಂಶುಪಾಲರು ಕರೆಯನ್ನು ಸ್ವೀಕರಿಸಲಿಲ್ಲ.