ಉಕ್ರೇನ್: ಕ್ಷಿಪಣಿ ದಾಳಿಯಲ್ಲಿ ಬಾಂಗ್ಲಾದ ನಾವಿಕ ಮೃತ್ಯು

ಹೊಸದಿಲ್ಲಿ, ಮಾ.3: ಉಕ್ರೇನ್ನಲ್ಲಿ ಬಾಂಗ್ಲಾದೇಶದ 29 ವರ್ಷದ ನಾವಿಕ ಹದಿಸುರ್ ರಹ್ಮಾನ್ ಆರಿಫ್ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದು ಬಾಂಗ್ಲಾದಲ್ಲಿರುವ ಆತನ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ. ಆರಿಫ್ ನ ಮೃತದೇಹವನ್ನಾದರೂ ಹುಟ್ಟೂರಿಗೆ ತರಲು ಕ್ರಮ ಕೈಗೊಳ್ಳುವಂತೆ ಕುಟುಂಬದವರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಆರಿಫ್ ಬಾಂಗ್ಲಾದೇಶ ಶಿಪಿಂಗ್ ಕಾರ್ಪೊರೇಶನ್ ನ ಹಡಗು ‘ಬಾಂಗ್ಲಾರ್ ಸಮೃದ್ಧಿ’ ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಹಡಗು ಕಪ್ಪುಸಮುದ್ರದ ಓಲ್ವಿಯಾ ಬಂದರಿನಲ್ಲಿ ಸಿಕ್ಕಿಬಿದ್ದಿದ್ದ ಸಂದರ್ಭ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಆರಿಫ್ ಮೃತಪಟ್ಟಿದ್ದಾರೆ. ಹಡಗಿನಲ್ಲಿದ್ದ ಇತರ 28 ಸಿಬಂದಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಫೆ.22ರಂದು ಟರ್ಕಿಯಿಂದ ಉಕ್ರೇನ್ ಬಂದರಿಗೆ ಆಗಮಿಸಿದ್ದ ಹಡಗು, ಅಲ್ಲಿಂದ ಆವೆಮಣ್ಣಿನ ಖನಿಜ ಹೇರಿಕೊಂಡು ಹೊರಡಬೇಕಿತ್ತು. ಆದರೆ ಅಷ್ಟರಲ್ಲಿ ರಶ್ಯಾದ ಆಕ್ರಮಣ ಆರಂಭವಾದ್ದರಿಂದ ಹಡಗು ಅಲ್ಲೇ ನಿಲ್ಲಬೇಕಾಯಿತು. ಕಾನೂನು ತೊಡಕಿನಿಂದಾಗಿ ಹಡಗಿನ ಸಿಬಂದಿಗಳನ್ನು ತೆರವುಗೊಳಿಸಲು ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.
ಬಾಂಗ್ಲಾದೇಶದ ಬರ್ಗುನಾ ನಗರದ ನಿವಾಸಿ ಆರಿಫ್ ತಂದೆ ನಿವೃತ್ತ ಶಿಕ್ಷಕರಾಗಿದ್ದು 4 ಮಕ್ಕಳ ಕುಟುಂಬದಲ್ಲಿ ಆರಿಫ್ ಮಾತ್ರ ದುಡಿಯುತ್ತಿದ್ದರಿಂದ ಈಗ ಕುಟುಂಬ ದುಡಿಯುವ ಕೈಗಳನ್ನು ಕಳೆದುಕೊಂಡು ಅನಾಥವಾಗಿದೆ. ಮಗನ ಮೃತದೇಹವನ್ನಾದರೂ ಹುಟ್ಟೂರಿಗೆ ತನ್ನಿ ಎಂದು ಆರಿಫ್ನ ತಾಯಿ ಅಮೀನಾ ಅಧಿಕಾರಿಗಳನ್ನು ಕೋರಿದ್ದಾರೆ. ಈ ಬಗ್ಗೆ ಉಕ್ರೇನ್ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಬರ್ಗುನಾದ ಜಿಲ್ಲಾಧಿಕಾರಿ ಶಹಾಬುದ್ದೀನ್ ಅಹ್ಮದ್ ಹೇಳಿದ್ದಾರೆ.







