ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಸೆರೆ ಇರಿಸಿಕೊಂಡ ವರದಿ ಇಲ್ಲ: ರಶ್ಯದ ಪ್ರತಿಪಾದನೆ ತಿರಸ್ಕರಿಸಿದ ಭಾರತ

ಹೊಸದಿಲ್ಲಿ, ಮಾ. 4: ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆ ಸೆರೆ ಇರಿಸಿಕೊಂಡಿದೆ ಎಂಬ ರಶ್ಯದ ಪ್ರತಿಪಾದನೆಗೆ ಗುರುವಾರ ತಿರುಗೇಟು ನೀಡಿರುವ ಭಾರತ ಸರಕಾರ, ನಾವು ಭಾರತದ ಎಲ್ಲಾ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಇದುವರೆಗೆ ಅಂತಹ ಯಾವುದೇ ವರದಿಯನ್ನು ಸ್ವೀಕರಿಸಿಲ್ಲ ಎಂದು ಹೇಳಿದೆ. ‘‘ಯಾವುದೇ ವಿದ್ಯಾರ್ಥಿ ಒತ್ತೆ ಸೆರೆ ಪರಿಸ್ಥಿತಿಯಲ್ಲಿರುವ ವರದಿಯನ್ನು ನಾವು ಸ್ವೀಕರಿಸಿಲ್ಲ. ಖಾರ್ಖಿವ್ ಹಾಗೂ ದೇಶದ ಪಶ್ಚಿಮಭಾಗದ ಸಮೀಪದ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ಯಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲು ನೆರವು ನೀಡುವಂತೆ ನಾವು ಉಕ್ರೇನ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.
ರಶ್ಯದ ಭೂಭಾಗಕ್ಕೆ ಹೋಗುವುದನ್ನು ತಡೆಯಲು ಮಾನವ ಗುರಾಣಿಯಾಗಿ ಬಳಿಸಲು ಖಾರ್ಖಿವ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ನ ಭದ್ರತಾ ಪಡೆ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಕ್ರೆಮ್ಲಿನ್ ಪ್ರತಿಪಾದಿಸಿದೆ ಒಂದು ದಿನದ ಬಳಿಕ ಭಾರತ ಸರಕಾರ ಈ ಹೇಳಿಕೆ ನೀಡಿದೆ. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅರಿಂದಮ್ ಬಾಗ್ಚಿ, ‘‘ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರೊಂದಿಗೆ ಅಲ್ಲಿರುವ ನಮ್ಮ ರಾಯಬಾರಿ ಕಚೇರಿ ನಿರಂತರ ಸಂಪರ್ಕದಲ್ಲಿದೆ. ಉಕ್ರೇನ್ ಅಧಿಕಾರಿಗಳ ಸಹಕಾರದಿಂದ ನಾವು ಗಮನಿಸುತ್ತಿದ್ದೇವೆ. ಹಲವು ವಿದ್ಯಾರ್ಥಿಗಳು ನಿನ್ನೆ ಖಾರ್ಖಿವ್ ತೊರೆದಿದ್ದಾರೆ. ಯಾವುದೇ ವಿದ್ಯಾರ್ಥಿ ಒತ್ತೆಸೆರೆಯಾಗಿರುವ ಬಗ್ಗೆ ನಾವು ವರದಿ ಸ್ವೀಕರಿಸಿಲ್ಲ’’ ಎಂದು ಅವರು ಹೇಳಿದ್ದಾರೆ.
ನಾವು ರಶ್ಯ, ರೊಮೇನಿಯಾ, ಪೋಲ್ಯಾಂಡ್, ಹಂಗೇರಿ, ಸ್ಲೋವಾಕಿಯಾ ಹಾಗೂ ಮೋಲ್ಡೋವಾ ಸೇರಿದಂತೆ ಈ ಪ್ರದೇಶದ ದೇಶಗಳೊಂದಿಗೆ ಪರಿಣಾಮಕಾರಿ ಸಮನ್ವಯ ಸಾಧಿಸುತ್ತಿದ್ದೇವೆ. ಕೆಳೆದ ಕೆಲವು ದಿನಗಳಲ್ಲಿ ಉಕ್ರೇನ್ನಿಂದ ದೊಡ್ಡ ಸಂಖ್ಯೆಯ ಭಾರತೀಯರನ್ನು ತೆರೆವುಗೊಳಿಸಿದ್ದೇವೆ. ಇದು ಸಾಧ್ಯವಾಗಲು ನೆರವು ನೀಡಿದ ಉಕ್ರೇನ್ನ ಅಧಿಕಾರಿಗಳನ್ನು ನಾವು ಪ್ರಶಂಸಿಸುತ್ತೇವೆ. ಭಾರತೀಯ ಪ್ರಜೆಗಳನ್ನು ಬರ ಮಾಡಿಕೊಂಡ ಹಾಗೂ ಅವರು ಸ್ವದೇಶಕ್ಕೆ ಮರಳು ವಿಮಾನಕ್ಕಾಗಿ ಕಾಯುತ್ತಿರುವ ಸಂದರ್ಭ ವಾಸ್ತವ್ಯದ ಸೌಲಭ್ಯ ಕಲ್ಪಿಸಿದ ಉಕ್ರೇನ್ ನ ಪಶ್ಚಿಮ ನೆರೆಯ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.







