ತೆರವು ಕಾರ್ಯಾಚರಣೆಗೆ ಮಾನವೀಯ ಕಾರಿಡಾರ್: ರಷ್ಯಾ, ಉಕ್ರೇನ್ ಒಪ್ಪಿಗೆ

ಕೀವ್: ಉಕ್ರೇನ್- ರಷ್ಯಾ ಸಂಘರ್ಷ ತೀವ್ರಗೊಂಡಿರುವ ನಡುವೆಯೇ ರಷ್ಯಾ ಮುನ್ನಡೆ ಯೋಜನೆಯಂತೆ ಸಾಗುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಏತನ್ಮಧ್ಯೆ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸುವ ಸಂಬಂಧ ಮಾನವೀಯ ಕಾರಿಡಾರ್ ರಚನೆಗೆ ಉಭಯ ದೇಶಗಳು ಒಪ್ಪಿಕೊಂಡಿವೆ.
ಮಾಸ್ಕೊ ಹಾಗೂ ಕೀವ್ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆಯ ಏಕೈಕ ಫಲಶ್ರುತಿಯೆಂದರೆ ಈ ಒಪ್ಪಂದ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಮಿರ್ ಝೆನೆಸ್ಕಿಯವರ ಸಲಹೆಗಾರರು ಪ್ರಕಟಿಸಿದ್ದಾರೆ. ಆದರೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ವಿವರ ನೀಡಿಲ್ಲ. ರಷ್ಯಾದ ಸಂಧಾನಕಾರ, ರಾಷ್ಟ್ರೀಯವಾದಿ ಸಂಸದ ಲಿನೊನಿಡ್ ಸುಲಸ್ಕಿ ಇದನ್ನು ದೃಢಪಡಿಸಿದ್ದು, ಶೀಘ್ರವೇ ಅನುಷ್ಠಾನಕ್ಕೆ ತರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ನವ ನಾಝಿಗಳನ್ನು ರಷ್ಯಾ ಬುಡಸಮೇತ ನಿರ್ಮೂಲನೆಗೊಳಿಸಲಿದೆ ಎಂದು ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯನ್ನು ಟೆಲೀಕೃತ ವಿಧಾನದ ಮೂಲಕ ಉದ್ಘಾಟಿಸಿದ ಅವರು, ರಷ್ಯನ್ನರು ಮತ್ತು ಉಕ್ರೇನಿಯನ್ನರು ಒಂದೇ ಎಂಬ ನಿಲುವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
"ಯಾವುದೇ ರಾಜಿ ಇಲ್ಲದ ಹೋರಾಟವನ್ನು ರಾಷ್ಟ್ರೀಯವಾದಿ ಸಶಸ್ತ್ರ ಗುಂಪುಗಳ ವಿರುದ್ಧ ಮುಂದುವರಿಸಲು ರಷ್ಯಾ ಉದ್ದೇಶಿಸಿದೆ" ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮಾಕ್ರೋನ್ ಜತೆ ಮಾತನಾಡಿದ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ ಪಾಶ್ಚಿಮಾತ್ಯ ದೇಶಗಳು ಮಿಲಿಟರಿ ನೆರವು ಹೆಚ್ಚಿಸುವಂತೆ ಉಕ್ರೇನ್ ಅಧ್ಯಕ್ಷರು ಮನವಿ ಮಾಡಿದ್ದಾರೆ. "ವಾಯುಮಾರ್ಗವನ್ನು ಮುಚ್ಚಲು ನಿಮಗೆ ಅಧಿಕಾರ ಇಲ್ಲದಿದ್ದರೆ, ಹೆಚ್ಚು ವಿಮಾನಗಳನ್ನು ನಮಗೆ ನೀಡಿ" ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಈ ಯುದ್ಧವನ್ನು ನಿಲ್ಲಿಸಲು ಪುಟಿನ್ ಜತೆಗಿನ ನೇರ ಮಾತುಕತೆಯೊಂದೇ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ.
ಗುರುವಾರ ರಷ್ಯನ್ ಪಡೆಗಳು ಉತ್ತರ ಉಕ್ರೇನ್‌ನ ಚೆರ್ನಿಹಿವ್ ನಗರದ ವಸತಿ ಪ್ರದೇಶಗಳಲ್ಲಿ ನಡೆಸಿದ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.







