ಒಂದೇ ವಾರದಲ್ಲಿ ಉಕ್ರೇನ್ ತೊರೆದ 10 ಲಕ್ಷ ನಿರಾಶ್ರಿತರು

ಪ್ರೆಮೈಸಲ್: ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದಾಗಿ ಹತ್ತು ಲಕ್ಷಕ್ಕೂ ಅಧಿಕ ನಿರಾಶ್ರಿತರು ಒಂದು ವಾರದಲ್ಲಿ ದೇಶ ತೊರೆದಿದ್ದಾರೆ. 2015ರಲ್ಲಿ ವಲಸೆ ಸಮಸ್ಯೆ ಎದುರಿಸಿದ್ದ ಸಂದರ್ಭದಲ್ಲಿ ಇಡೀ ವರ್ಷದಲ್ಲಿ ಯೂರೋಪ್ ನಲ್ಲಿ ಆಶ್ರಯ ಬಯಸಿದ್ದ ಒಟ್ಟು ನಿರಾಶ್ರಿತರ ಸಂಖ್ಯೆಗಿಂತಲೂ ಇದು ಅಧಿಕ.
ಏಳು ವರ್ಷದ ಹಿಂದೆ ರಷ್ಯಾ ಬಾಂಬ್ ದಾಳಿಯಿಂದಾಗಿ ಕಂಗೆಟ್ಟಿದ್ದ ಸಂಘರ್ಷ ಪೀಡಿತ ಸಿರಿಯಾದಿಂದ ಸಾವಿರಾರು ಮಂದಿ ನಿರಾಶ್ರಿತರು ಹರಿದು ಬಂದಿದ್ದರು. ಅಫ್ಘಾನಿಸ್ತಾನ, ಇರಾಕ್ ಹಾಗೂ ಇತರೆಡೆಗಳಿಂದಲೂ ನಿರಾಶ್ರಿತರು ಆಗಮಿಸಿದ್ದರು. ಪಾಶ್ಚಿಮಾತ್ಯ ದೇಶಗಳತ್ತ ಆಗಮಿಸುವ ವೇಳೆ ಸಾವಿರಾರು ಮಂದಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದರು.
ಒಂದೇ ವಾರದಲ್ಲಿ 13 ಲಕ್ಷ ನಿರಾಶ್ರಿತರು ಪಾಶ್ಚಿಮಾತ್ಯ ದೇಶಗಳಿಗೆ ಆಗಮಿಸಿರುವುದು ಈ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ. ನಿರಾಶ್ರಿತರು ಮತ್ತು ರಾಜಕೀಯ ಆಶ್ರಯ ಅರಸಿ ಬಂದವರನ್ನು ನಿಭಾಯಿಸುವುದು ಹೇಗೆ ಎನ್ನುವುದು ಯೂರೋಪಿಯನ್ ಒಕ್ಕೂಟದ ಚಿಂತೆಯಾಗಿದೆ. ಆದಾಗ್ಯೂ ರಷ್ಯನ್ ಪಡೆಗಳು ವ್ಯಾಪಕ ಹಾನಿ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ನೆರೆ ದೇಶಕ್ಕೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಯೂರೋಪಿಯನ್ ಒಕ್ಕೂಟದ ದೇಶಗಳು ಒಗ್ಗಟ್ಟು ಪ್ರದರ್ಶಿಸಿವೆ.
ಉಕ್ರೇನ್‌ನ 4.4 ಕೋಟಿ ಜನರ ಪೈಕಿ ಶೇಕಡ 2ರಷ್ಟು ಮಂದಿ ಈಗಾಗಲೇ ವಲಸೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಯುಎನ್‌ಎಚ್‌ಸಿಆರ್ ಹೇಳಿದೆ. ಹಲವು ಕಡೆಗಳಿಂದ ಸ್ವಯಂಸೇವಕರ ತಂಡ ಆಗಮಿಸಿರುವ ಹಿನ್ನೆಲೆಯಲ್ಲಿ ನಿರಾಶ್ರಿತರನ್ನು ಬರಮಾಡಿಕೊಳ್ಳುವ ಪ್ರಕ್ರಿಯೆ ಸುಗಮವಾಗಿ ಸಾಗಿದೆ.
ಉಕ್ರೇನ್‌ನಿಂದ ತೆರವುಗೊಂಡು ಪೋಲಂಡ್ ಆಸ್ಪತ್ರೆಗಳಿಗೆ ಆಗಮಿಸಿರುವ ಉಕ್ರೇನಿಯನ್ನರಿಗೆ ವೈದ್ಯಕೀಯ ನೆರವನ್ನು ಕ್ಲೀವ್‌ಲ್ಯಾಂಡ್ ಮೈಡನ್ ಅಸೋಸಿಯೇಶನ್ ನೀಡುತ್ತಿದೆ. ಉಕ್ರೇನ್ ಮೂಲಕದ ವೈದ್ಯ ಲಾರಾ ಬುಕವಿನಾ ನೇತೃತ್ವದ ಗುಂಪು ಈ ಹಿಂದೆ 2014ರಲ್ಲಿ ರಷ್ಯಾ ನಡೆಸಿದ ದಾಳಿ ಸಂದರ್ಭದಲ್ಲೂ ಸಹಾಯ ಹಸ್ತ ಚಾಚಿತ್ತು.
ಉಕ್ರೇನ್‌ನಿಂದ ಪಲಾಯನ ಮಾಡಿ ಬಂದವರಿಗೆ ತಾತ್ಕಾಲಿಕವಾಗಿ ಸುರಕ್ಷತೆ ಮತ್ತು ವಸತಿ ಅನುಮತಿ ನೀಡಲು ಯೂರೋಪಿಯನ್ ಒಕ್ಕೂಟ ಗುರುವಾರ ನಿರ್ಧರಿಸಿದೆ. 27 ದೇಶಗಳ ಒಕ್ಕೂಟಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಸಂಖ್ಯೆಯ ನಿರಾಶ್ರಿತರು ಆಗಮಿಸುವ ನಿರೀಕ್ಷೆ ಇದೆ ಎಂದು ಯೂರೋಪಿಯನ್ ಒಕ್ಕೂಟದ ವಲಸೆ ಆಯುಕ್ತ ವೈವಾ ಜಾನ್ಸನ್ ಹೇಳಿದ್ದಾರೆ. ನಿರಾಶ್ರಿತರಿಗೆ 500 ದಶಲಕ್ಷ ಯೂರೊ ಮಾನವೀಯ ನೆರವು ನೀಡಲು ಒಕ್ಕೂಟ ಮುಂದಾಗಿದೆ.







