ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದ ನಟ ಸೋನು ಸೂದ್

Photo: PTI
ಚಂಡಿಗಢ, ಮಾ. 3: ಯುದ್ಧ ಪೀಡಿತ ಉಕ್ರೇನ್ ನ ಖಾರ್ಖಿವ್ ನಗರದಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳು ಪೋಲಿಷ್ ಗಡಿ ತಲುಪಲು ಹಾಗೂ ತಮ್ಮ ದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಲು ನಟ ಹಾಗೂ ಸಮಾಜ ಸೇವಕ ಸೋನು ಸೂದ್ ನೆರವಿನ ಹಸ್ತ ಚಾಚಿದ್ದಾರೆ. ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಗೊಳಿಸಿದ ಸಂದರ್ಭ ವಲಸೆ ಕಾರ್ಮಿಕರು ತಮ್ಮ ಊರು ತಲುಪಲು ನೆರವು ನೀಡಿ ಸೋನು ಸೂದ್ ಅವರು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದರು.
‘‘ನಾನು ಹಾಗೂ ನನ್ನ ಮೂವರು ಗೆಳೆಯರು ಖಾರ್ಖಿವ್ ನಲ್ಲಿದ್ದಾಗ ಸೋನು ಸೂದ್ ತಂಡ ನಮ್ಮನ್ನು ಸಂಪರ್ಕಿಸಿತು. ಅವರು ನಮಗೆ ಬಸ್ನ ವ್ಯವಸ್ಥೆ ಮಾಡಿದರು. ಅಲ್ಲದೆ ಗಡಿ ದಾಟಲು ನೆರವು ನೀಡಿದರು. ಈಗ ನಾವು ಬುಡಾಪೆಸ್ಟ್ ರೈಲು ನಿಲ್ದಾಣದಲ್ಲಿದ್ದೇವೆ. ರಾಯಬಾರಿ ಕಚೇರಿಯಿಂದ ಮುಂದಿನ ನೆರವಿಗಾಗಿ ಕಾಯುತ್ತಿದ್ದೇವೆ’’ ಎಂದು ಡ್ನಿಪ್ರೋಪೆಟ್ರೋವ್ಸ್ಕ್ ರಾಜ್ಯ ವೈದ್ಯಕೀಯ ಅಕಾಡೆಮಿಯ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಹಾಗೂ ಮಧ್ಯಪ್ರದೇಶದ ರೇವಾದ ನಿವಾಸಿ ಸೃಷ್ಠಿ ಸಿಂಗ್ ಅವರು ಹೇಳಿದ್ದಾರೆ. ‘‘ನಾನು ಸೋನು ಸೂದ್ ಅವರ ತಂಡದ ನೆರವಿನಿಂದ ದಿಲ್ಲಿ ವಿಮಾನ ನಿಲ್ದಾಣ ತಲುಪಿದೆ. ಈಗ ನಾನು ಅಹ್ಮದಾಬಾದ್ ವಿಮಾನಕ್ಕೆ ಕಾಯುತ್ತಿದ್ದೇನೆ.
ಲಿವಿವ್ ನಗರದ ಪೆಟ್ರೋಲ್ ಪಂಪ್ ನಲ್ಲಿ ನಾವು ಸಿಲುಕಿಕೊಂಡಾಗ ಅವರು ನಮಗೆ ಆಹಾರ ಹಾಗೂ ನೀರು ಒದಗಿಸಿದರು. ಅಲ್ಲದೆ, ಈಗ ಅವರು ಅಹ್ಮದಾಬಾದ್ ಗೆ ತೆರಳಲು ನನಗೆ ವಿಮಾನದ ಟಿಕಟ್ ಹಣ ಕೂಡ ನೀಡಿದ್ದಾರೆ’’ ಎಂದು ಟೆರ್ನೋಪಿಲ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾನಿಲಯದ ಮೂರನೇ ವರ್ಷದ ವಿದ್ಯಾರ್ಥಿನಿ ಕ್ರಾಂಜ್ ಹೇಳಿದ್ದಾರೆ. ತೆರವು ಕಾರ್ಯಾಚರಣೆ ಬಗ್ಗೆ ವಿವರಿಸಿರುವ ಸೋನು ಸೂದ್, ವಿದ್ಯಾರ್ಥಿಗಳು ಇರುವ ಸ್ಥಳಕ್ಕೆ ಸ್ಥಳೀಯ ಟ್ಯಾಕ್ಸಿ ಕಳುಹಿಸಲಾಗಿತ್ತು.
ಅಲ್ಲಿಂದ ಅವರನ್ನು ಖಾರ್ಖಿವ್ ರೈಲು ನಿಲ್ದಾಣಕ್ಕೆ ಕರೆ ತರಲಾಯಿತು. ಖಾರ್ಖಿವ್ ನಿಂದ ಅವರು ಲೀವ್ ನಗರದ ಸುರಕ್ಷಿತ ಪ್ರದೇಶಕ್ಕೆ ರೈಲಿನ ಮೂಲಕ ಪ್ರಯಾಣಿಸಿದರು. ಅಲ್ಲಿಂದ ಪೋಲೀಷ್ ಗಡಿಗೆ ತಲುಪಲು ಅವರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ‘‘ಕೆಲವು ವಿದ್ಯಾರ್ಥಿಗಳಿಗೆ ನಾವು ವಿಮಾನ ಟಿಕೆಟ್ ನ ಹಣ ಕೂಡ ನೀಡಿದ್ದೇವೆ. 12 ಮಂದಿ ವಿದ್ಯಾರ್ಥಿಗಳು ಈಗಾಗಲೇ ತಮ್ಮ ದೇಶ ತಲುಪಿದ್ದಾರೆ’’ ಎಂದು ಸೋನು ಸೂದ್ ಹೇಳಿದ್ದಾರೆ.







