ನವಾಬ್ ಮಲಿಕ್ 55 ಲಕ್ಷ ರೂ. ಅಲ್ಲ, 5 ಲಕ್ಷ ರೂ. ಪಾವತಿಸಿದ್ದಾರೆ: ಮುದ್ರಣ ದೋಷ ಒಪ್ಪಿಕೊಂಡ ಈಡಿ

ಮುಂಬೈ: ಭಯೋತ್ಪಾದಕ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್‌ಗೆ ಕುರ್ಲಾ ಉಪನಗರದಲ್ಲಿರುವ ಭೂಮಿಗಾಗಿ ರಾಜ್ಯ ಸಚಿವ ನವಾಬ್ ಮಲಿಕ್ ಅವರು 5 ಲಕ್ಷ ರೂಪಾಯಿ ನಗದು ಪಾವತಿಸಿದ್ದಾರೆ. "ಮುದ್ರಣ ದೋಷ" ದಿಂದಾಗಿ ಕಳೆದ ರಿಮಾಂಡ್ ಮನವಿಯಲ್ಲಿ 55 ಲಕ್ಷ ರೂ. ಎಂದು ಉಲ್ಲೇಖಿಸಲಾಗಿತ್ತು ಎಂದು ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ರಾಜ್ಯ ಸಚಿವ ನವಾಬ್ ಮಲಿಕ್ ಅವರ ಬಂಧನದ ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಗುರುವಾರ ತಿಳಿಸಿದೆ.
ಮಲಿಕ್ ಅವರು ಪಾರ್ಕರ್ ಮೂಲಕ ದಾವೂದ್‌ನ ಭಯೋತ್ಪಾದಕ ಜಾಲಕ್ಕೆ ಹಣ ನೀಡಿದ್ದರಿಂದ ಭೂ ವ್ಯವಹಾರವು ಅಪರಾಧದ ಆದಾಯವಾಗಿದೆ ಎಂದು ಈಡಿ ಹೇಳಿಕೊಂಡಿದೆ.
ಮಲಿಕ್ ಕುರ್ಲಾ ಉಪನಗರದಲ್ಲಿ ಮತ್ತೊಂದು ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಈಡಿ ಹೇಳಿದೆ. ಮಲಿಕ್ ಹಾಗೂ ಭೂಗತ ಜಗತ್ತಿನ ಪಾತ್ರಗಳು ಹೊರಹೊಮ್ಮಿವೆ ಎಂದಿದೆ.
ಎಎಸ್‌ಜಿ ಅನಿಲ್ ಸಿಂಗ್ ಹಾಗೂ ಈಡಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಅವರು ಮಲಿಕ್ ರನ್ನು ಆರು ದಿನಗಳ ಕಾಲ ಕಸ್ಟಡಿಗೆ ಕೋರಿದರು. ಫೆಬ್ರವರಿ 23 ರಂದು ಬಂಧಿಸಲ್ಪಟ್ಟ ಮಲಿಕ್ ಈ ಹಿಂದೆ ನೀಡಲಾದ ಕಸ್ಟಡಿಯಲ್ಲಿ ಹೆಚ್ಚಿನ ಭಾಗ ಆಸ್ಪತ್ರೆಯಲ್ಲಿದ್ದರು.
ಫೆ.25-28ರವರೆಗೆ ಅವರು ಆಸ್ಪತ್ರೆಯಲ್ಲಿದ್ದ ಕಾರಣ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಲಿಲ್ಲ. ಇದು ಮತ್ತು ಸಲ್ಲಿಸಿದ ಹೊಸ ಸಂಗತಿಗಳನ್ನು ಪರಿಗಣಿಸಿ ಅವರನ್ನು ಮಾರ್ಚ್ 7 ರವರೆಗೆ ಈಡಿ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ವಿಶೇಷ ಪಿಎಂಎಲ್‌ಎ ನ್ಯಾಯಾಧೀಶ ಆರ್. ಕೆ. ರೋಕಡೆ ಹೇಳಿದರು.







