ಉತ್ತರಪ್ರದೇಶ: ರೈತನಿಗೆ ವಂಚಿಸಿದ ಆರೋಪ, ನಾಲ್ವರು ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲು

ಮುಝಾಫರ್‌ನಗರ (ಯುಪಿ): ಶಾಮ್ಲಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಸರಕಾರದಿಂದ ಗುತ್ತಿಗೆ ಮಂಜೂರು ಮಾಡಿಸಿಕೊಳ್ಳಲು ದಾಖಲೆಗಳನ್ನು ನಕಲಿ ಮಾಡಿದ ಆರೋಪದ ಮೇಲೆ ನಾಲ್ವರು ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿಗಳು ಜಿಂಜಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಯೂಸುಫ್‌ಪುರ್ ಚೋತ್ರಾ ಗ್ರಾಮದ ತನ್ನ ಹೊಲದಿಂದ ಮರಳು ತೆಗೆಯಲು ನಕಲಿ ದಾಖಲೆಗಳನ್ನು ಬಳಸಿ ಗುತ್ತಿಗೆ ಪಡೆದಿದ್ದಾರೆ ಎಂದು ರೈತ ಲಿಲು ಸಿಂಗ್ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿವಾಕರ್ ಕಶ್ಯಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಬಿಜೆಪಿ ವಿಭಾಗೀಯ ಅಧ್ಯಕ್ಷ ಭೂಪೇಂದ್ರ ಸಿಂಗ್ ಹಾಗೂ ಮಾಜಿ ವಿಭಾಗೀಯ ಅಧ್ಯಕ್ಷ ಬೀರೇಂದ್ರ ಎಂದು ಗುರುತಿಸಲಾಗಿದೆ.
ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420, 467, 468, 471, 406 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶ್ಯಾಂಬೀರ್ ಸಿಂಗ್ ತಿಳಿಸಿದ್ದಾರೆ.







