ಚೆನ್ನೈನ ಪ್ರಥಮ ದಲಿತ ಮೇಯರ್ ಆಗಿ ಪ್ರಿಯಾ ರಾಜನ್ ಅಧಿಕಾರ ಸ್ವೀಕಾರ

Photo: Twitter/@chennaicorp
ಚೆನ್ನೈ: ಡಿಎಂಕೆಯ ಪ್ರಿಯಾ ರಾಜನ್ ಅವರು ಗ್ರೇಟರ್ ಚೆನ್ನೈ ಕಾರ್ಪೊರೇಷನ್ನ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಪ್ಪತ್ತೆಂಟು ವರ್ಷದ ಪ್ರಿಯಾ ಎಂ.ಕಾಂ ಪದವೀಧರೆಯಾಗಿದ್ದು ಚೆನ್ನೈಯ ಪ್ರಥಮ ದಲಿತ ಮೇಯರ್ ಹಾಗೂ ಅತ್ಯಂತ ಕಿರಿಯ ಮೇಯರ್ ಆಗಿದ್ದಾರೆ. ಆಕೆ ನಗರದ ಮೂರನೇ ಮಹಿಳಾ ಮೇಯರ್ ಆಗಿದ್ದಾರೆ.
ಕಾರ್ಪೊರೇಷನ್ ಆಯುಕ್ತ ಗಗನ್ದೀಪ್ ಸಿಂಗ್ ಬೇಡಿ ನೂತನ ಮೇಯರ್ ಗೆ ಪ್ರಮಾಣವಚನ ಬೋಧಿಸಿ ಮೇಯರ್ ಧರಿಸುವ ಸಾಂಪ್ರದಾಯಿಕ ಗೌನ್ ಅನ್ನು ಅವರಿಗೆ ಹಸ್ತಾಂತರಿಸಿದರು. ಡಿಎಂಕೆ ಸಚಿವರಾದ ಪಿ ಕೆ ಶೇಖರ್ ಮತ್ತು ಮಾ ಸುಬ್ರಮಣಿಯನ್ ಮೇಯರ್ ಗೆ ಸಂಪ್ರದಾಯದಂತೆ ಗದೆ ಹಸ್ತಾಂತರಿಸಿದರು.
ಪ್ರಿಯಾ ಅವರು ವಾರ್ಡ್ 74 ರ ಕೌನ್ಸಿಲರ್ ಆಗಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪಾಲಿನ ಆದರ್ಶ ಎಂದು ಹೇಳುವ ಪ್ರಿಯಾ, ಡಿಎಂಕೆ ಶಾಸಕ ಚೆಂಗೈ ಶಿವಂ ಅವರ ಸೋದರ ಸೊಸೆಯಾಗಿದ್ದಾರೆ, ವಿವಾಹಿತೆಯಾಗಿರುವ ಪ್ರಿಯಾಗೆ ನಾಲ್ಕು ವರ್ಷದ ಮಗಳಿದ್ದಾಳೆ.
ನಗರದ ರಸ್ತೆಗಳ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ತಾವು ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.





