ರಾಜ್ಯ ಬಜೆಟ್ 2022: ಶಿಕ್ಷಣ ವ್ಯವಸ್ಥೆ ಬಲವರ್ಧನೆ ಸಾಧ್ಯವಿಲ್ಲ; ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ

ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ
ಬೆಂಗಳೂರು: '2021-22ರ ಆಯವ್ಯಯದಲ್ಲಿ ಶೇಕಡಾ 11 ರಷ್ಟು, ಅಂದರೆ 29,688 ಕೋಟಿಯನ್ನು ನೀಡಲಾಗಿತ್ತು. ಈ ಆಯವ್ಯಯದಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ಹಣ 31,980 ಕೋಟಿ. ಕೇವಲ 2,292 ಕೋಟಿ ಅಂದರೆ ಶೇಕಡಾವಾರು 7.2 ರಷ್ಟನ್ನು ಹೆಚ್ಚಿಸಲಾಗಿದೆ. ಈ ಹಣದಿಂದ ಆಯವ್ಯದಲ್ಲಿ ಹೇಳಿರುವ ಗುಣಾತ್ಮಕ ಶಿಕ್ಷಣ ಕಷ್ಟ ಸಾಧ್ಯ' ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.
ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ಪ್ರತಿಯೊಂದು ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಕೂಗು ರಾಜ್ಯದಲ್ಲಿ ಹಲವು ದಶಕಗಳಿಂದ ಕೇಳಿಬರುತ್ತಿದೆ. ಈ ಸಂಬಂಧ, ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಸ್ತೃತ ಸಂಶೋಧನೆಯ ಮೂಲಕ `ಸರಕಾರಿ ಶಾಲೆಗಳ ಸಬಲೀಕರಣ ವರದಿಯನ್ನುʼ 2017ರಲ್ಲಿ ಸಲ್ಲಿಸಿದೆ. ಆದರೆ, ಆಯವ್ಯಯದಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.
ರಾಷ್ಟ್ರೀಯ ಶಿಕ್ಷಣ ನೀತಿ ಆಶಯದಂತೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಲು ಅಗತ್ಯ ಸೌಕರ್ಯ ಹಾಗು ನರ್ಸರಿ ಶಿಕ್ಷಕರ ನೇಮಕಾತಿಗೆ ಜೊತೆಗೆ ರಾಜ್ಯದಲ್ಲಿ ಖಾಲಿ ಇರುವ ಸುಮಾರು 25,000 ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಿ ಬುನಾದಿ ಕಲಿಕೆಯನ್ನು ಗಟ್ಟಿಗೊಳಿಸಲು ಅಗತ್ಯ ವಿಶೇಷ ಅನುದಾನ ಒದಗಿಸುವುದು. ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು 3 ರಿಂದ 18 ವರ್ಷದವರೆಗೆ ವಿಸ್ತರಿಸಿ ಬಾಲ ಕಾರ್ಮಿಕ ಪದ್ಧತಿಯನ್ನು 18 ವರ್ಷದವರೆಗೆ ನಿಷೇಧಿಸಲು ಆಯವ್ಯಯದಲ್ಲಿ ವಿಶೇಷ ಅನುದಾನ ಏನೂ ಇಲ್ಲ. ಒಟ್ಟಾರೆ, ಈ ಆಯವ್ಯಯದಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಅಂದರೆ, ಸರಕಾರೀ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಬಲವರ್ಧನೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







