ದಿಢೀರ್ ರಕ್ಷಣೆ ಹಿಂಪಡೆದ ಗೃಹ ಇಲಾಖೆ: ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ನಟ ಚೇತನ್
ನಟ ಚೇತನ್ ಅಹಿಂಸಾ
ಬೆಂಗಳೂರು, ಮಾ.4: ಗೃಹ ಇಲಾಖೆ ದಿಢೀರ್ ಗನ್ ಮ್ಯಾನ್ ಹಿಂಪಡೆದಿರುವ ಕ್ರಮ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಅವರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭೇಟಿ ಮಾಡಿದ ಅವರು, ಗನ್ ಮ್ಯಾನ್ ಹಾಗೂ ಭದ್ರತೆ ಹಿಂಪಡೆದಿರುವ ಕುರಿತು ದೂರು ಸಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಬಳಿಕ ರಾಜ್ಯ ಸರಕಾರ ಸ್ವಯಂಪ್ರೇರಿತ ಗನ್ ಮ್ಯಾನ್ ಸಿಬ್ಬಂದಿ ನಿಯೋಜಿಸಿ, ಭದ್ರತೆ ಒದಗಿಸಿತ್ತು. ಆದರೆ, ಇತ್ತೀಚಿಗೆ ನ್ಯಾಯಾಂಗ ಬಂಧನದ ಬಳಿಕ ದಿಢೀರ್ ಕಾರಣ ನೀಡದೆ, ಗನ್ ಮ್ಯಾನ್ ಅನ್ನು ಹಿಂಪಡೆದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದ್ದು, ಅವರು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದರು.
ತಮ್ಮ ಅಧಿಕೃತ ನಿವಾಸದ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಕೆ ಸೇರಿದಂತೆ ಇನ್ನಿತರೆ ಭದ್ರತೆ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದ ಅವರು, ಶೇಷಾದ್ರಿಪುರಂ ಠಾಣಾ ಪೊಲೀಸರು ನನ್ನ ಮೊಬೈಲ್ ಸೀಮ್ ಅನ್ನು ಜಪ್ತಿ ಮಾಡಿದ್ದು, ಇದನ್ನು ವಾಪಸ್ಸು ನೀಡುವಂತೆಯೂ ಕೇಳಿದ್ದೇನೆ ಎಂದರು.
ಕೆಲವರು ನನ್ನನ್ನು ವಿದೇಶಿ ಪ್ರಜೆ ಎನ್ನುತ್ತಿದ್ದಾರೆ. ಆದರೆ, ಎಲ್ಲಿ ಹುಟ್ಟಬೇಕು ಎನ್ನುವುದು ನನ್ನ ಕೈಯಲ್ಲಿ ಇಲ್ಲ. ನಾನು ಎಂದಿಗೂ ಕನ್ನಡಿಗ. ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು, ಮತ ಚಲಾವಣೆ ಮಾಡಬಾರದು ಅಷ್ಟೇ. ಉಳಿದ ನನ್ನ ಸಾಮಾಜಿಕ ಹೋರಾಟಗಳಿಗೆ ಯಾವುದೇ ಅಡೆತಡೆಗಳು ಇಲ್ಲ ಎಂದು ಚೇತನ್ ನುಡಿದರು.