ಮಡಿಕೇರಿ: ಉಕ್ರೇನ್ ನಿಂದ ತವರು ತಲುಪಿದ ವಿದ್ಯಾರ್ಥಿಗಳು

ಮಡಿಕೇರಿ ಮಾ.4 : ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಕುಶಾಲನಗರದ ಬಿ.ಕೆ.ಲಿಖಿತ್ ಹಾಗೂ ಚಂದನ್ ಗೌಡ ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಉಕ್ರೇನ್ ನಿಂದ ದೆಹಲಿ ತಲುಪಿದ್ದ ವಿದ್ಯಾರ್ಥಿಗಳು ಇಂದು ಬೆಳಗ್ಗೆ ದೆಹಲಿಯಿಂದ ಕುಶಾಲನಗರಕ್ಕೆ ಬಂದಿದ್ದಾರೆ. ಪೋಷಕರು ಸೇರಿದಂತೆ ಅನೇಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಧೈರ್ಯ ಮಾಡಿ ಹೊರಡದೆ ಇದ್ದಿದ್ದರೆ ಜೀವಂತವಾಗಿ ಇರುತ್ತಿದ್ದೆವೋ ಗೊತ್ತಿಲ್ಲ ಎಂದು ತಿಳಿಸಿದ ಚಂದನ್ ಗೌಡ, ನಾವು ಓದುತ್ತಿದ್ದ ವಿಶ್ವವಿದ್ಯಾನಿಲಯದ ಅಕ್ಕಪಕ್ಕದ ವಿವಿಗಳು ಈಗಾಗಲೇ ನಾಶವಾಗಿವೆ. ನಮ್ಮ ವಿವಿಗೂ ಉಳಿಗಾಲವಿಲ್ಲ ಎನ್ನುವ ಆತಂಕವಿದೆ. ನಾವು ಬಹಳ ಕಷ್ಟದಲ್ಲಿ ಗಡಿಯನ್ನು ತಲುಪಿದ್ದೇವೆ. ಊಟ, ತಿಂಡಿ ಇಲ್ಲದೆ ಪ್ರಯಾಣ ಮಾಡಿದ್ದೇವೆ. ಮೃತ ನವೀನ್ ಕೂಡ ನಮ್ಮ ಜೊತೆಗಿದ್ದ ವಿದ್ಯಾರ್ಥಿ, ಕಳೆದ 2 ವರ್ಷಗಳಿಂದ ಒಟ್ಟಿಗೆ ಇದ್ದೆವು. ಅವನ ಅಗಲಿಕೆ ನಮಗೆ ಬಹಳ ಬೇಸರ ತಂದಿದೆ ಎಂದರು.
ಬಿ.ಕೆ.ಲಿಖಿತ್ ಮಾತನಾಡಿ ಕಾರ್ಕಿವ್ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸುತ್ತಿದೆ. ಸದ್ಯ ನಾವು ಬದುಕುಳಿದು ತಾಯ್ನಾಡಿಗೆ ಬಂದಿದ್ದು, ಹರ್ಷ ತಂದಿದೆ ಎಂದು ತಿಳಿಸಿದರು. ತಮ್ಮ ಮಕ್ಕಳು ಮರಳಿ ಬಂದ ಬಗ್ಗೆ ಪೋಷಕರು ತೃಪ್ತಿ ವ್ಯಕ್ತಪಡಿಸಿದರು, ಸಿಹಿ ಹಂಚಿ ಸಂಭ್ರಮಿಸಿದರು.
ವಿದ್ಯಾರ್ಥಿಗಳಾದ ಅಶ್ವಿನ್ ಕುಮಾರ್, ನಿರ್ಮಲಾ ಎಂ.ಪಿ ಹಾಗೂ ಡಯಾನಾ ಮೇರಿ ಮಾ.5 ರಂದು ಕೊಡಗಿಗೆ ಬರುವ ಸಾಧ್ಯತೆಗಳಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.







