ಮಂಗಳೂರು: ರಥಬೀದಿ ಪದವಿ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಗೆ ನಿರ್ಬಂಧ
ವಿದ್ಯಾರ್ಥಿನಿ ಜತೆ ವಿದ್ಯಾರ್ಥಿಯ ಮಾತಿನ ಚಕಮಕಿ- ದೂರು

ಮಂಗಳೂರು, ಮೇ 4: ದಯಾನಂದ ಪೈ- ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮತ್ತೆ ಹಿಜಾಬ್ ಗೆ ನಿರ್ಬಂಧಿಸಿದಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದ್ದು, ಕಾಲೇಜಿನ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿನಿಗೆ ವಿದ್ಯಾರ್ಥಿಯೊಬ್ಬ ಅಡ್ಡಿಪಡಿಸಿದ ಕುರಿತಂತೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ವೇಳೆ, ಕಾಲೇಜಿನ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿನಿಗೆ ಅಡ್ಡಿಪಡಿಸಿ ಮಾತಿನ ಚಕಮಕಿ ನಡೆಸಿದ್ದ ವಿದ್ಯಾರ್ಥಿಯ ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಬರಹಗಳೊಂದಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಸೆನ್ ಪೊಲೀಸ್ ಠಾಣೆಯಲ್ಲೂ ದೂರೊಂದು ದಾಖಲಾಗಿದೆ.
ಸಂಜೆಯ ವೇಳೆ ರಥಬೀದಿ ಕಾಲೇಜಿಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಎರಡೂ ಪ್ರಕರಣಗಳ ಬಗ್ಗೆ ಕಾನೂನು ತಜ್ಞರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಗುರುವಾರ ಐದು ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವ ಸಂದರ್ಭ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಹಾಗೂ ಅಡ್ಡಿಪಡಿಸಲಾಗಿದೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಮತ್ತೆ ಅದೇ ಐದು ಮಂದಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಬಂದ ಸಂದರ್ಭ ಕಾಲೇಜಿನ ಪ್ರವೇಶ ದ್ವಾರದಲ್ಲಿ ಕೆಲ ಶಿಕ್ಷಕರು ಹಾಗೂ ಕಾಲೇಜಿಗೆ ಸಂಬಂಧಿಸಿದ ಕೆಲವರು ವಿದ್ಯಾರ್ಥಿನಿಯರ ಪ್ರವೇಶ ನಿರಾಕರಿಸಿದ್ದಾರೆ ಎಂದೂ ದೂರಲಾಗಿದ್ದು, ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂದು ಬೆಳಗ್ಗೆ ಮತ್ತೆ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶ ದ್ವಾರದ ಬಳಿ ಪ್ರಾಂಶುಪಾಲರಲ್ಲಿ ಪರೀಕ್ಷೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸುತ್ತಿದ್ದ ಸಂದರ್ಭ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಸಂಘರ್ಷ ನಡೆದಿದೆ. ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾನೂನು ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಪ್ರಾಂಶುಪಾಲರು ಅನುಮತಿ ನೀಡಿದ್ದರು ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ವಿಚಾರಿಸಿದ ಸಂದರ್ಭ ಯಾವುದೇ ಅನುಮತಿ ನೀಡಿಲ್ಲ ಎಂದು ಪ್ರಾಂಶುಪಾಲರು ಹೇಳಿರುವುದು ಗಮನಕ್ಕೆ ಬಂದಿದ್ದು, ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಅವರು ಇಲಾಖಾ ಮುಖ್ಯಸ್ಥರಿಂದ ಆಂತರಿಕ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ಈ ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಅಡ್ಡಿಪಡಿಸಿ ಮಾತಿನ ಚಕಮಕಿ ನಡೆಸಿದ್ದ ಆ ವಿದ್ಯಾರ್ಥಿಯ ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಬರಹಗಳೊಂದಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ವಿದ್ಯಾರ್ಥಿಗೆ ಸಂಬಂಧಿಸಿದ ಕೆಲವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದು ಕ್ರಮ ವಹಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ, ಆಕ್ಷೇಪಾರ್ಹವಾಗಿ ಯಾವುದೇ ರೀತಿಯ ಪೋಸ್ಟ್ ಹಾಕುವುದು, ಶೇರ್ ಮಾಡುವುದು ಮಾಡಿದರೆ ಕಾನೂನು ಕ್ರಮಣ ವಹಿಸುವ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.









