ಪೋಲ್ಯಾಂಡ್ನಿಂದ ಬೆಂಗಳೂರು ತಲುಪಿದ ಉಡುಪಿಯ ರೋಹನ್ ಧನಂಜಯ

ಕರ್ನಾಟಕ ಭವನದಲ್ಲಿ ರೋಹನ್ ಆಹಾರ ಸೇವಿಸುತ್ತಿರುವುದು.
ಉಡುಪಿ: ಉಕ್ರೇನ್ ಯುದ್ಧಪೀಡಿತ ದೇಶವನ್ನು ತೊರೆದ ಬ್ರಹ್ಮಾವರದ ರೋಹನ್ ಧನಂಜಯ ಕೊನೆಗೂ ಇಂದು ಅಪರಾಹ್ನ ಹೊಸದಿಲ್ಲಿಗೆ ಬಂದಿಳಿದರು. ಅವರೊಂದಿಗೆ ಅದೇ ವಿಮಾನದಲ್ಲಿ ಕರ್ನಾಟಕದ ಇನ್ನೂ 20ರಷ್ಟು ವಿದ್ಯಾರ್ಥಿಗಳು ಜೊತೆಗಿದ್ದರು.
ಬಳಿಕ ಕರ್ನಾಟಕ ಭವನದಲ್ಲಿ ವಿಶ್ರಾಂತಿಯನ್ನು ಪಡೆದ ರೋಹನ್ ಹಾಗೂ ಅವರ ಮಿತ್ರರು ರಾಜ್ಯ ಸರಕಾರ ಒದಗಿಸಿದ ವಿಮಾನದಲ್ಲಿ ರಾತ್ರಿ 8:30ಕ್ಕೆ ಬೆಂಗಳೂರಿಗೆ ಪ್ರಯಾಣಿಸಿ 10:30ರ ಸುಮಾರಿಗೆ ರಾಜಧಾನಿಯನ್ನು ತಲುಪಿದರು. ಅವರು ಶನಿವಾರ ಬೆಳಗ್ಗೆ ಅಥವಾ ಸಂಜೆ ಬ್ರಹ್ಮಾವರದ ಮನೆಗೆ ಆಗಮಿಸಲಿದ್ದಾರೆ ಎಂದು ರೋಹನ್ ಅವರ ತಂದೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ ತಿಳಿಸಿದರು.
ಯುದ್ಧ ಪೀಡಿತ ಉಕ್ರೇನ್ನ ಖಾರ್ಕೀವ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ರೋಹನ್ ಧನಂಜಯ್ ಇಂದು ಅಪರಾಹ್ನ ಭಾರತ ಸರಕಾರ ವ್ಯವಸ್ಥೆಗೊಳಿಸಿದ ವಿಮಾನದಲ್ಲಿ ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಉಕ್ರೇನ್ನಿಂದ ಗಡಿ ನಗರವಾದ ಲೈವ್ ಮೂಲಕ ಬುಧವಾರ ಪೊಲೆಂಡ್ಗೆ ಆಗಮಿಸಿದ್ದ ಅವರು ಮೂರು ಗಂಟೆ ತಡವಾಗಿ ಮಧ್ಯರಾತ್ರಿ 1:00 ಗಂಟೆಗೆ ಅಲ್ಲಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು.
ಈ ಮೂಲಕ ಉಕ್ರೇನ್ನಲ್ಲಿದ್ದ ಉಡುಪಿ ಜಿಲ್ಲೆಯ ಏಳು ಮಂದಿ ವೈದ್ಯಕೀಯ ಕಲಿಯುತಿದ್ದ ವಿದ್ಯಾರ್ಥಿಗಳ ಪೈಕಿ ಐವರು ಮನೆಗಳಿಗೆ ಸುರಕ್ಷಿತವಾಗಿ ಮರಳಿ ಬಂದಂತಾಗಿದೆ. ಉದ್ಯಾವರ ಸಾಲ್ಮರದ ಮೃಣಾಲ್ ಫೆ.28ರಂದು ಮನೆಗೆ ಮರಳಿದ್ದರೆ, ಉಡುಪಿಯ ನಂದಿನಿ ಅರುಣ್ ಮಾ.1ರಂದು ತಂದೆ ಇದ್ದ ಮಸ್ಕತ್ ತಲುಪಿದ್ದರು. ಪರ್ಕಳ ಮೂಲದ ನಿಯಮ್ ರಾಘವೇಂದ್ರ ಹಾಗೂ ಬೈಂದೂರು ತಾಲೂಕು ನಾವುಂದದ ಅಂಕಿತಾ ಜಗದೀಶ್ ಪೂಜಾರಿ ನಿನ್ನೆ ಹೊಸದಿಲ್ಲಿಗೆ ಮರಳಿದ್ದರು.
ನಿಯಮ್ ಅವರು ತಂದೆ ಬಿ.ವಿ.ರಾಘವೇಂದ್ರ ಅವರು ಹೊಸದಿಲ್ಲಿಯ ಕರ್ನಾಟಕ ಭವನದ ವ್ಯವಸ್ಥಾಪಕರಾಗಿರುವುದರಿಂದ ಅಲ್ಲಿಯೇ ಉಳಿದು ಕೊಂಡಿದ್ದಾರೆ. ಅಂಕಿತಾ ಅವರು ನಿನ್ನೆ ಸಂಜೆ ಮುಂಬಯಿಗೆ ಬಂದಿದ್ದು, ಅಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಕೆಲವು ದಿನ ಇರಲಿದ್ದಾರೆ.
ಹಂಗೇರಿಯಲ್ಲಿ ಅನಿಫ್ರೆಡ್: ಖಾರ್ಕೀವ್ನಿಂದ ರೈಲಿನಲ್ಲಿ ಪ್ರಯಾಣಿಸಿ ಗಡಿಭಾಗವಾದ ಲೈವ್ಗೆ ಬಂದಿದ್ದ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ ಅವರು ಇದೀಗ ಹಂಗೇರಿಯ ಬುಕಾರೆಸ್ಟ್ ತಲುಪಿಸಿದ್ದಾರೆ. ಅವರು ಅಲ್ಲಿಂದ ಮುಂದಿನ ವಿಮಾನದಲ್ಲಿ ಭಾರತಕ್ಕೆ ಪ್ರಯಾಣಿಸುವ ನಿರೀಕ್ಷೆ ಇದೆ.
ಗ್ಲೆನ್ವಿಲ್ ಇನ್ನೂ ಉಕ್ರೇನಿನಲ್ಲಿ: ಆದರೆ ಕೆಮ್ಮಣ್ಣುವಿನ ಗ್ಲೆನ್ವಿಲ್ ಫೆರ್ನಾಂಡೀಸ್ ಇನ್ನೂ ಉಕ್ರೇನ್ನಲ್ಲೇ ಇದ್ದಾರೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಬಂದ ಮಾಹಿತಿ ತಿಳಿಸಿದೆ. ಭಾರತೀಯ ಧೂತಾವಾಸದ ನಿರ್ದೇಶನದಂತೆ ಅವರು ಖಾರ್ಕೀವ್ ನಗರಕ್ಕೆ ಸಮೀಪದ ಪೆಸೊಚಿನ್ ಪಟ್ಟಣದಲ್ಲಿದ್ದಾರೆ ಎಂದು ಮಾಹಿತಿ ತಿಳಿಸಿದೆ. ಅವರು ಉಕ್ರೇನ್ನಿಂದ ಯಾವಾಗ ಬರುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
ನಾವುಂದದ ಅಂಕಿತಾ ಮುಂಬಯಿಯಲ್ಲಿ
ಉಕ್ರೇನ್ನ ಖಾರ್ಕೀವ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಬೈಂದೂರು ತಾಲೂಕು ನಾವುಂದ ಮಸ್ಕಿಯ ಅಂಕಿತಾ ಜಗದೀಶ್ ಪೂಜಾರಿ ಗುರುವಾರ ಸಂಜೆ ಹೊಸದಿಲ್ಲಿಯಿಂದ ಮುಂಬಯಿಗೆ ಬಂದಿದ್ದು, ಅಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದಾರೆ.

(ಅಂಕಿತಾ ಪೂಜಾರಿ )
ಉಕ್ರೇನ್ನ ಖಾರ್ಕೀವ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಬೈಂದೂರು ತಾಲೂಕು ನಾವುಂದ ಮಸ್ಕಿಯ ಅಂಕಿತಾ ಜಗದೀಶ್ ಪೂಜಾರಿ ಗುರುವಾರ ಸಂಜೆ ಹೊಸದಿಲ್ಲಿಯಿಂದ ಮುಂಬಯಿಗೆ ಬಂದಿದ್ದು, ಅಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದಾರೆ. ಕೆಲವು ತಿಂಗಳ ಹಿಂದಷ್ಟೇ ವೈದ್ಯಕೀಯ ಕಲಿಯಲು ತೆರಳಿದ್ದ ಇವರು ರಶ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಪ್ರಾರಂಭಗೊಂಡಾಗ ಹಾಸ್ಟೆಲ್ನ ಬಂಕರ್ನಲ್ಲಿದ್ದರು. ಅವರು ಬುಧವಾರ ಬೆಳಗ್ಗೆ ಖಾರ್ಕೀವ್ನಿಂದ ಹೊರಟು ಸಂಜೆ ಪೊಲ್ಯಾಂಡ್ ತಲುಪಿದ್ದರು.
ಪೊಲ್ಯಾಂಡ್ನಲ್ಲಿ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಅವರಿಗೆ ಭಾರತಕ್ಕೆ ಮರಳಲು ಬೇಕಾದ ವ್ಯವಸ್ಥೆ ಕಲ್ಪಿಸಿದ್ದರೆಂದು ತಿಳಿದುಬಂದಿದೆ.
ಅಲ್ಲಿಂದ ಹೊಸದಿಲ್ಲಿಗೆ ಬಂದು ನಿನ್ನೆ ಸಂಜೆ ಮುಂಬಯಿ ತಲುಪಿದ್ದರು. ಒಂದೆರಡು ದಿನಗಳಲ್ಲಿ ಅವರು ನಾವುಂದದ ಮನೆಗೆ ಬರುವ ನಿರೀಕ್ಷೆ ಇದೆ.








