ಮಂಗಳೂರು: ಮಂಗಳಾ ಕಪ್-2022 ಓಪನ್ ಬಾಡ್ಮಿಂಟನ್ ಟೂರ್ನ್‌ಮೆಂಟ್ ಉದ್ಘಾಟನೆ
ಮಂಗಳೂರು: ಬಾಡ್ಮಿಂಟನ್ ಕ್ರೀಡೆಗಾಗಿ ದುಡಿಯುತ್ತಿರುವ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ ಗ್ರಾಮೀಣ ಸೇರಿದಂತೆ ನಗರದ ಕ್ರೀಡಾಪಟುಗಳಿಗೆ ಬೆಳೆಸುವ ಕೆಲಸ ಶ್ಲಾಘನೀಯ ಎಂದು ಮಂಗಳೂರಿನ ಶ್ರೀದೇವಿ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್‌ಸ್ಟಿಟ್ಯೂಶನ್‌ನ ಚೇರಮನ್ ಎ.ಸದಾನಂದ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‌ನ ವತಿಯಿಂದ ನಡೆದ ಮಂಗಳಾ ಕಪ್-2022 ಆಲ್ ಇಂಡಿಯಾ ಓಪನ್ ಬಾಡ್ಮಿಂಟನ್ ಟೂರ್ನ್‌ಮೆಂಟ್ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ ಇಂತಹ ರಾಷ್ಟ್ರಮಟ್ಟದ ಪಂದ್ಯಾಟವನ್ನು ಆಯೋಜಿಸುವ ಮೂಲಕ ಬರೀ ಜಿಲ್ಲೆಗೆ ಮಾತ್ರವಲ್ಲ ರಾಜ್ಯದಲ್ಲಿಯೇ ಗುರುತಿಸುವ ಕಾರ್ಯ ಮಾಡಿದೆ ಎಂದರು.
ಯುವಜನಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಕೋವಿಡ್ ಕಾರಣದಿಂದ ಎರಡು ವರ್ಷ ಮಂಕಾಗಿದ್ದ ಕ್ರೀಡಾಕೂಟಗಳಿಗೆ ಮಂಗಳಾ ಕಪ್ ಹೊಸ ಹುರುಪು ತಂದುಕೊಡುವ ಕೆಲಸ ಮಾಡಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬಾಡ್ಮಿಂಟನ್ ಅಸೋಸಿಯೇಶನ್ ಉಪಾಧ್ಯಕ್ಷ ಹಾಗೂ ರಾಜ್ಯ ಬಾಡ್ಮಿಂಟನ್ ಚಾಂಪಿಯನ್ ಅಶೋಕ್ ಪೂವಯ್ಯ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಾತನಾಡಿದರು.ಈ ಸಂದರ್ಭ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‌ನ ಕಾರ್ಯದರ್ಶಿ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು. ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಸುಮಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಬಾಡ್ಮಿಂಟನ್ ಪಟುಗಳ ಆಕರ್ಷಕ ಪಥ ಸಂಚಲನ ನಡೆಯಿತು.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಮಂಗಳಾ ಕಪ್ ಕ್ರೀಡಾ ಕೂಟಕ್ಕೆ ಕರ್ನಾಟಕ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ 825 ಕ್ರೀಡಾಪಟುಗಳು 20ಕ್ಕೂ ಅಧಿಕ ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.
ನಗರದ ಯು.ಎಸ್.ಮಲ್ಯ, ಗೋಲ್ಡನ್ ಶಟ್ಲ್ ಅಕಾಡೆಮಿ ಹಾಗೂ ಕೆ.ಎಂ.ಸಿ. ಯ ಮರೀನಾ ಕ್ರೀಡಾಂಗಣ ಗಳಲ್ಲಿ ಏಕ ಕಾಲದಲ್ಲಿ ಕ್ರೀಡಾ ಸ್ಪರ್ಧೆ ಗಳು ನಡೆಯುತ್ತಿದೆ. ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಬೆದ್ರ ಮೀಡಿಯ ಯೂ ಟ್ಯೂಬ್ ಪೇಜ್ ಮೂಲಕ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮಾ.6ರಂದು ಮಂಗಳಾ ಕಪ್‌ನ ಸಮಾರೋಪ ಸಂಜೆ 6ಕ್ಕೆ ನಡೆಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.