ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು, ಮಲ್ಪೆ ಬೋಟಿನವರ ಮಧ್ಯೆ ಹೊಡೆದಾಟ: ಉಪನ್ಯಾಸಕ ಸಹಿತ ಹಲವು ವಿದ್ಯಾರ್ಥಿಗಳಿಗೆ ಗಾಯ
ಮಾ.4: ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಬಂದಿದ್ದ ಕೇರಳ ರಾಜ್ಯದ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಸ್ಥಳೀಯರ ತಂಡ ಹಲ್ಲೆ ನಡೆಸಿದ್ದಾರೆನ್ನಾದ ಘಟನೆ ಇಂದು ಸಂಜೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ. ಹಲ್ಲೆಯಿಂದ ಕಾಲೇಜಿನ ಉಪನ್ಯಾಸಕ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಇದರಲ್ಲಿ ನಾಲ್ಕೈದು ಮಂದಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳ ಮಲ್ಲಪುರಂ ಜಿಲ್ಲೆಯ ಖಾಸಗಿ ಕಾಲೇಜಿನ ಸುಮಾರು ನಾಲ್ವರು ಉಪನ್ಯಾಸಕರು ಸೇರಿ 37 ಮಂದಿ ಮಾ.3ರಂದು ಉಡುಪಿ ಜಿಲ್ಲಾ ಪ್ರವಾಸಕ್ಕೆ ಬಂದಿದ್ದರು. ಕೊಲ್ಲೂರು ಕೊಡಚಾದ್ರಿ ಮುಗಿಸಿ ಇಂದು ಮಲ್ಪೆ ಬೀಚ್‌ಗೆ ಬಂದ ಇವರು, ಬೋಟಿನಲ್ಲಿ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದರು. ಅಲ್ಲಿ ವಿಹಾರ ಮುಗಿಸಿ ವಾಪಾಸ್ಸು ಬೋಟಿನಲ್ಲಿ ತೀರಕ್ಕೆ ಬಂದರು ಎಂದು ತಿಳಿದುಬಂದಿದೆ. ಈ ವೇಳೆ ಬೋಟಿನಿಂದ ಇಳಿಯುವಾಗ ವಿದ್ಯಾರ್ಥಿಗಳು ಮತ್ತು ಬೋಟಿನವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದು ವಿಕೋಪ ತಿರುಗಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಈ ವೇಳೆ ಸ್ಥಳೀಯರು ಸುಮಾರು 50 ಮಂದಿ ಸೇರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಎರಡು ತಂಡದವರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದು, ಬಳಿಕ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿದುಬಂದಿದೆ.