ಭಾರತದ ಧ್ವಜ ಹಿಡಿದ ಭಾರತೀಯ ವಿದ್ಯಾರ್ಥಿಗಳನ್ನೇ ಪಾಕಿಸ್ತಾನಿಗಳೆಂದು ಬಿಂಬಿಸಿದ ನೆಟ್ಟಿಗರು

Photo/twitter
ಹೊಸದಿಲ್ಲಿ: ಪಾಕಿಸ್ತಾನಿ ಹಾಗೂ ತುರ್ಕಿಷ್ ವಿದ್ಯಾರ್ಥಿಗಳು ಉಕ್ರೇನ್ನಿಂದ ತಪ್ಪಿಸಿಕೊಳ್ಳಲು ಭಾರತದ ತ್ರಿವರ್ಣ ಧ್ವಜ ಪತಾಕೆಯನ್ನು ಬಳಸಿದ್ದಾರೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು ವೈರಲ್ ಆಗುತ್ತಿದೆ. ಹಲವು ಮಾಧ್ಯಮಗಳು ಈ ಕುರಿತು ಸುದ್ದಿಯನ್ನು ಮಾಡಿವೆ.
ANI, NDTV, News18 ಮೊದಲಾದ ಸುದ್ದಿ ಸಂಸ್ಥೆಗಳು ಈ ಕುರಿತು ಸುದ್ದಿಯನ್ನು ಮಾಡಿದ್ದು, ಈ ಸುದ್ದಿ ನಿಜವೂ ಹೌದು. ಆದರೆ, ಸದ್ಯ, ಭಾರತೀಯ ವಿದ್ಯಾರ್ಥಿಗಳದ್ದೇ ಚಿತ್ರವನ್ನು ಪಾಕಿಸ್ತಾನಿ ವಿದ್ಯಾರ್ಥಿಗಳೆಂದು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಪ್ರಚಾರ ಮಾಡುವ ಘಟನೆಯೂ ಬೆಳಕಿಗೆ ಬಂದಿದೆ.
ಇಲ್ಲಿ ನೀಡಲಾಗಿರುವ ಈ ಚಿತ್ರದಲ್ಲಿರುವವರನ್ನು ಪಾಕಿಸ್ತಾನಿ ವಿದ್ಯಾರ್ಥಿಗಳೆಂದು ಬಿಂಬಿಸಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ರಾಲ್ ಮಾಡುತ್ತಿದ್ದಾರೆ. ಆದರೆ, ಇವರೆಲ್ಲ ಭಾರತೀಯ ವಿದ್ಯಾರ್ಥಿಗಳಾಗಿದ್ದು, ಹಂಗೇರಿಯ ಬುಡಾಪೆಸ್ಟ್ನಿಂದ ಭಾರತಕ್ಕೆ ಮರಳಲು ಪ್ರಯಾಣಿಸುತ್ತಿರುವವರು ಎಂದು ಹಂಗೇರಿಯ ಭಾರತೀಯ ರಾಯಭಾರ ಕಛೇರಿಯ ಅಧಿಕೃತ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಅದಾಗ್ಯೂ ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳನ್ನು ಲೇವಡಿ ಮಾಡಲು ಈ ಫೋಟೋ ವ್ಯಾಪಕ ಬಳಕೆಯಾಗುತ್ತಿದ್ದು, ʼಕೆಲವರು ಅಪಾಯ ಬಂದಾಗ ತಂದೆಯೇ ಬೇಕಾಗುತ್ತದೆʼ ಎಂದು ಕಮೆಂಟ್ ಹಾಕಿದ್ದರೆ, ಇನ್ನು ಕೆಲವರು ದೇಶಭಕ್ತಿಯ ಪಾಠ ಕಲಿಸಲು ಇದೇ ಚಿತ್ರವನ್ನು ಬಳಸಿಕೊಂಡಿದ್ದಾರೆ. ಅಗಸ್ಟ್ 15 ಮತ್ತು ಜನವರಿ 26 ರಂದು ಬಳಸಿ ಎಸೆಯುವ ಧ್ವಜದ ಮಹತ್ವ ಈಗ ಅರಿವಾಗುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
More batches of Indian students enter Hungary from Ukrainian side at Zahony crossing, travelling onward to Budapest for return to India by AI flight today @MEAIndia @IndiainUkraine @IndianDiplomacy @DDNewslive @airindiain pic.twitter.com/XleEiGwbyH
— Indian Embassy in Hungary (@IndiaInHungary) February 26, 2022







